ಧರ್ಮಸ್ಥಳ: ಪ್ರತಿಷ್ಠಿತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ 2026–28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಮಹಾ ಚುನಾವಣೆಯು ಇಂದು ಬೆಳಿಗ್ಗೆ 10.30 ಗಂಟೆಗೆ ಕಾಲೇಜಿನ ಎಸ್ಡಿಎಂ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ತಾರನಾಥ್ ಶೆಟ್ಟಿ ಅವರ ನೇತೃತ್ವದಲ್ಲಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ಚುನಾವಣಾ ಪ್ರಕ್ರಿಯೆ ಇಂದು ಮತ ಎಣಿಕೆ ಹಾಗೂ ವಿಜೇತ ಅಭ್ಯರ್ಥಿಗಳ ಘೋಷಣೆಯೊಂದಿಗೆ ಸಂಪೂರ್ಣಗೊಂಡಿತು.
ಮತ ಎಣಿಕೆ ಪ್ರಕ್ರಿಯೆಯು ಕಾಲೇಜಿನ ಎರಡನೇ ಮಹಡಿಯಲ್ಲಿ ಶಾಂತ ಹಾಗೂ ಪಾರದರ್ಶಕ ರೀತಿಯಲ್ಲಿ ನಡೆಯಿತು. ಚುನಾವಣೆಯ ಫಲಿತಾಂಶದಂತೆ 2026–28ನೇ ಸಾಲಿನ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ರಾಘವೇಂದ್ರ ರಾವ್, ಉಪಾಧ್ಯಕ್ಷರಾಗಿ ಉಮೇಶ್ ಗಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಈ ದಿನಕರ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಜಯಶ್ರೀ ರಟ್ಟಿಹಳ್ಳಿ, ಸಂಚಾಲಕರಾಗಿ ಅಶ್ವಿನ್ ಹಾಗೂ ವಿನೋದ್ ಕುಮಾರ್ ಎ. ರವರು ಆಯ್ಕೆಯಾಗಿದ್ದಾರೆ. ಎಲ್ಲಾ ವಿಜೇತ ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದ್ದಾರೆ.

ಈ ಸಂದರ್ಭ ನಡೆದ ಮಹಾಸಭೆಯ ಅಧ್ಯಕ್ಷತೆಯನ್ನು ಡಾ. ದೇವರಾಜ ಕೆ. ಅವರು ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಮತಿ ಬಾಳಿಕ, ಅಧ್ಯಾಪಕರಾದ ಮಹೇಶ್ಚಂದ್ರ, ಭರತೇಶ್ ಹಾಗೂ ಗ್ರಂಥಾಲಯ ಪ್ರಮುಖರಾದ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಚುನಾವಣಾ ಅಧಿಕಾರಿಯಾಗಿ ಡಾ.ನರೇಶ್ ಮಲ್ಲಿಗೆ ಮಾಡು ಹಾಗೂ ಸಂಪೂರ್ಣ ಸಂಯೋಜಕರಾಗಿ ಡಾ. ಅನ್ನಪೂರ್ಣ ಅವರು ಕಾರ್ಯನಿರ್ವಹಿಸಿದರು.
ವಿಜೇತ ಅಭ್ಯರ್ಥಿಗಳು ತಮ್ಮ ಮುಂದಿನ ಅವಧಿಯ ಕಾರ್ಯಯೋಜನೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ಬಲವರ್ಧನೆ, ಕಾಲೇಜಿನ ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಕೈಜೋಡಿಸುವ ಬದ್ಧತೆಯನ್ನು ಸಭೆಯಲ್ಲಿ ವಿವರಿಸಿದರು. ಚುನಾವಣೆಯ ಯಶಸ್ಸಿಗೆ ಕಾಲೇಜಿನ ಆಡಳಿತ ಮಂಡಳಿ, ಅಧ್ಯಾಪಕ ವೃಂದ ಹಾಗೂ ಹಳೆ ವಿದ್ಯಾರ್ಥಿಗಳು ಸಹಕಾರ ನೀಡಿದರು.


