ಮಂಗಳೂರು: ‘ಸಮಾಜದ ಸಂಕಷ್ಟದ ಸಮಯದಲ್ಲಿ ಸ್ವಯಂ ಸ್ಫೂರ್ತಿಯಿಂದ ಮುನ್ನುಗ್ಗಿ ಕಾರ್ಯಪ್ರವೃತ್ತರಾಗುವ ತೀರಾ ಅಪರೂಪದ ವ್ಯಕ್ತಿಗಳಲ್ಲಿ ದಿ| ಜಲಂಧರ ರೈ ಪ್ರಮುಖರು. ಅವರು ಓರ್ವ ನಿಸ್ಪೃಹ ಸರ್ವ ಸಮರ್ಪಿತ ಕಾರ್ಯಕರ್ತ. ಕಾರ್ಕಳದ ಅಜೆಕಾರು ಮತ್ತು ಕೋಟೆಕಾರಿನ ಆನಂದಾಶ್ರಮ ಪ್ರೌಢ ಶಾಲೆಗಳಲ್ಲಿ ಜನಮನ ಗೆದ್ದ ಅಧ್ಯಾಪಕರಾಗಿ, ಸಾಮಾಜಿಕ ಸಂಘಟಕರಾಗಿ, ಕ್ರೀಡಾ ತರಬೇತುದಾರರಾಗಿ, ಯಕ್ಷಗಾನ ಕಲಾವಿದರಾಗಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಬಹುಮುಖೀ ಸಾಧಕರಾಗಿ ಸಾವಿರಾರು ಜನರಿಗೆ ಮಾರ್ಗದರ್ಶಕರಾಗಿದ್ದ ಅವರು ನಾಡಿನಾದ್ಯಂತ ಸಂಚರಿಸಿದ ಧೀಮಂತ ನಾಯಕ; ಶ್ರೇಷ್ಠ ಮಾನವತಾವಾದಿ’ ಎಂದು ದಿ| ಜಲಂಧರ ರೈ ಅವರ ನಿಕಟವರ್ತಿ, ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಬೀರಿ ಕೋಟೆಕಾರ್ ಮತ್ತು ಶ್ರೀ ಗಣೇಶ ಭಜನಾ ಮಂದಿರ ಬೀರಿ ಆಶ್ರಯದಲ್ಲಿ ಆನಂದಾಶ್ರಮ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ ಹಿತೈಷಿಗಳ ಸಹಕಾರದೊಂದಿಗೆ ದಿ| ಎಸ್.ಜಲಂಧರ ರೈ ಅವರ 25 ನೇ ವರ್ಷದ ಪುಣ್ಯ ಸ್ಮರಣೆಗಾಗಿ ಸಂಕೊಳಿಗೆಯ ಶಕ್ತಿ ಮೈದಾನದಲ್ಲಿ ಇತ್ತೀಚೆಗೆ (ಅಕ್ಟೋಬರ್ 19) ನಡೆದ ಜಿಲ್ಲಾಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟ ‘ಜಲಂಧರ ಟ್ರೋಫಿ’ ಸಂದರ್ಭದಲ್ಲಿ ಜರಗಿದ ದಿ| ಜಲಂಧರ ರೈ ಸಂಸ್ಮರಣಾ ಸಮಾರಂಭದಲ್ಲಿ ಅವರು ಸಂಸ್ಮರಣಾ ಭಾಷಣ ಮಾಡಿದರು.
‘ಪುತ್ತೂರು ಮೂಲದವರಾದ ಸೇರ್ತಾಜೆ ಜಲಂಧರ ರೈ ಬೆಟ್ಟಂಪಾಡಿ ಪ್ರೌಢಶಾಲೆ ಮತ್ತು ಪುತ್ತೂರು ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ತಾವು ಸಾಮಾಜಿಕ ಮತ್ತು ಯಕ್ಷಗಾನೀಯ ಚಟುವಟಿಕೆಗಳಲ್ಲಿ ಜೊತೆಯಾಗಿದ್ದು ಪುತ್ತೂರಿನ ಕರ್ನಾಟಕ ಯಕ್ಷ ಭಾರತಿ ತಂಡದ ಮುಖಾಂತರ ಬೆಂಗಳೂರು, ಪೂನಾ ಮತ್ತು ದೆಹಲಿಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಲ್ಲದೆ ಆಕಾಶವಾಣಿ ಮತ್ತು ದೂರದರ್ಶನಗಳಲ್ಲೂ ನಿರಂತರ ಕಾರ್ಯಕ್ರಮಗಳನ್ನು ಸಂಯೋಜಿಸಿ, ಅಬ್ಬಕ್ಕ ಉತ್ಸವ ಸಮಿತಿ ಹಾಗೂ ವಿವಿಧ ಸಂಘಟನೆಗಳಲ್ಲಿ ಒಟ್ಟಾಗಿ ದುಡಿದಿರುವ ನೆನಪುಗಳು ಸದಾ ಹಸಿರು’ ಎಂದವರು ತಮ್ಮ ಒಡನಾಟದ ದಿನಗಳನ್ನು ಸ್ಮರಿಸಿಕೊಂಡರು. ದಿ.ಮೈಸೂರು ಎಲೆಕ್ಟ್ರಿಕಲ್ಸ್ ಲಿ. ಬೆಂಗಳೂರು ಇದರ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಬದುಕಿನಲ್ಲಿ ಸಾರ್ಥಕತೆ :
ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ ‘ಸಾರ್ವಜನಿಕ ಜೀವನದಲ್ಲಿ ಶುದ್ಧ ಚಾರಿತ್ರ್ಯ, ಪ್ರಾಮಾಣಿಕತೆ ಮತ್ತು ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡುವವವರು ಅತ್ಯಂತ ವಿರಳ. ಜಲಂಧರ ರೈ ಅವರು ಜೀವಿಸಿದ್ದಷ್ಟೂ ಕಾಲ ಶಿಕ್ಷಣ ಕ್ಷೇತ್ರದ ತಮ್ಮ ವೃತ್ತಿಯೊಂದಿಗೆ ನಮ್ಮ ಧರ್ಮ – ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗಾಗಿ ನಿಸ್ವಾರ್ಥವಾಗಿ ದುಡಿದು ಎಲ್ಲರ ಪ್ರೀತಿ ವಿಶ್ವಾಸಗಳನ್ನು ಗಳಿಸುವ ಮೂಲಕ ಬದುಕಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ’ ಎಂದು ದಿವಂಗತರ ಗುಣಗಾನ ಮಾಡಿದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ನಾರಾಯಣ ಕುಂಪಲ ಪ್ರಾಸ್ತಾವಿಕ ಭಾಷಣ ಮಾಡಿ ‘ಶಿಕ್ಷಣ, ಕ್ರೀಡೆ ಮತ್ತು ಸಾಮಾಜಿಕ ಸಂಘಟನೆಯಲ್ಲಿ ನೂರಾರು ಕಾರ್ಯಕರ್ತರು ಮತ್ತು ಕ್ರೀಡಾಳುಗಳನ್ನು ರೂಪಿಸಿದ ಜಲಂಧರ ರೈಯವರದು ಆದರ್ಶ ವ್ಯಕ್ತಿತ್ವ. ಕೋಟೆಕಾರು ಬೀರಿಯ ಗಣೇಶೋತ್ಸವವನ್ನು ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರೈಯವರ ಸ್ಮರಣಾರ್ಥ ಶ್ರೀ ಗಣೇಶ ಭಜನಾ ಮಂದಿರದ ವಠಾರದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ’ ಎಂದರು.
ಸಾಧಕರ ಸನ್ಮಾನ:
ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ನಿವೃತ್ತ ಮುಖ್ಯೋಪಾಧ್ಯಾಯ ವಿಶ್ವನಾಥ ಎಂ.ಕೆ. ಕೋಳಿಯೂರು, ಸಂಘಟನಾ ಕ್ಷೇತ್ರದಲ್ಲಿ ವಿಶ್ವಹಿಂದೂ ಪರಿಷತ್ತು ಮಂಗಳೂರು ವಿಭಾಗದ ಶಿವಾನಂದ ಮೆಂಡನ್, ಯಕ್ಷಗಾನ ಗುರು ಸನಾತನ ಯಕ್ಷಾಲಯ ಮಂಗಳೂರು ಸ್ಥಾಪಕರಾದ ರಾಕೇಶ್ ರೈ ಅಡ್ಕ, ಮಾಜಿ ರಾಷ್ಟ್ರೀಯ ಕಬಡ್ಡಿ ಆಟಗಾರ ಮನೋಜ್ ಉಚ್ಚಿಲ್ ಅವರನ್ನು ಸನ್ಮಾನಿಸಲಾಯಿತು
ಕೋಟೆಕಾರು ಬೀರಿಯಲ್ಲಿರುವ ದಿ| ಜಲಂಧರ ರೈ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆಯಲ್ಲಿ ಕ್ರೀಡಾ ಜ್ಯೋತಿಯನ್ನು ಸಂಕೊಳಿಗೆ ಶಕ್ತಿ ಮೈದಾನಕ್ಕೆ ತರಲಾಯಿತು. ಬಳಿಕ ವೇದಿಕೆಯಲ್ಲಿ ಅವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆ ಮಾಡಿದರು. ಕ್ರೀಡಾಂಗಣದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಕೂಂಡಾಣದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಶ್ ರೈ ಕೋಟೆಕಾರು ಗುತ್ತು ನೆರವೇರಿಸಿದರು .
ಆನಂದಾಶ್ರಮ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಕೆ.ಆರ್ ಚಂದ್ರ, ರಾ. ಸ್ವ.ಸೇವಕ ಸಂಘ ದ.ಪ್ರಾಂತ ಪರ್ಯಾವರಣ ಸಂರಕ್ಷಣಾ ಗತಿ ವಿಧಿ ಪ್ರಮುಖ ಚಂದ್ರಹಾಸ ಕಣೀರುತೋಟ, ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ದಿ.ಜಲಂಧರ್ ರೈ ಅವರ ಸಹೋದರಿ ಪುಷ್ಪಲತಾ ಪ್ರವೀಣ್ ಕುಮಾರ್ ಶೆಟ್ಟಿ ಅಡ್ಯಾರ್, ಭಾಜಪಾ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಹಿರಿಯ ಕಬಡ್ಡಿ ಆಟಗಾರ ಅಮರನಾಥ ರೈ, ಪ್ರಮುಖರಾದ ಎ.ಜೆ .ಶೇಖರ್, ರಮೇಶ್ ಅಜೆಕಾರು, ಗುರುಮೂರ್ತಿ, ಗೀತಾ ಮೂಡುಬಿದಿರೆ, ಜಯಲಕ್ಷ್ಮಿ ರೈ, ನಟ- ನಿರ್ದೇಶಕ ಜೆ.ಪಿ.ತುಮಿನಾಡು, ವಿಶ್ವನಾಥ ಅಸೈಗೋಳಿ , ಪ್ರಶಾಂತ ಗಟ್ಟಿ ಕೊಲ್ಯ, ವಿಠಲ ಜಿ.ಕೋಟೆಕಾರು, ಶ್ರೀನಿವಾಸ ಶೆಟ್ಟಿ ಮಾಡೂರು, ದೇವದಾಸ್ ಕೊಂಡಾಣ, ಹಿರಿಯರಾದ ಸೀತಾರಾಮ ಬಂಗೇರ ಕೊಲ್ಯ, ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಶಂಕರ ನಾರಾಯಣ ಆಚಾರ್ಯ, ಚಂದ್ರಶೇಖರ ಉಚ್ಚಿಲ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೀವನ್ ಸೋಮೇಶ್ವರ ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷರಾದ ರಾಘವ ಸಿ. ಉಚ್ಚಿಲ್ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಜಯಂತ ಸಂಕೊಳಿಗೆ, ಆಶಿಕ್ ಮಾಡೂರು, ಪ್ರವೀಣ್ ಬಸ್ತಿ, ನಿಖಿಲ್ ರಾಜ್ ಕೊಲ್ಯ ವಿವಿಧ ಕಾರ್ಯಕ್ರಮಗಳನ್ನು ನಿರೂಪಿಸಿದರು. ಶ್ರೀಕಾಂತ್ ಬೇಕಲ್ ವಂದಿಸಿದರು. ಮಾತೃ ಮಂಡಳಿ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ಬಳಿಕ ದಿನವಿಡೀ ಕಬಡ್ಡಿ ಪಂದ್ಯಾಟ ನಡೆಯಿತು. ಸಾಯಂಕಾಲ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಜರಗಿತು.



