ತುಳುನಾಡಿನ ಸ್ವಾತಂತ್ರ್ಯ ಹೋರಾಟಗಾರ ಸಮರವೀರ ಕೆದಂಬಾಡಿ ರಾಮಯ್ಯಗೌಡರ ಹೆಸರನ್ನು ಮಂಗಳೂರಿನಲ್ಲಿರುವ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಮತ್ತು ತುಳುನಾಡಿನ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಅಬ್ಬಕ್ಕನ ಹೆಸರನ್ನು ಮಂಗಳೂರಿನಲ್ಲಿರುವ ಲೇಡಿಗೋಶನ್ ಹೆರಿಗೆ ಆಸ್ಪತ್ರೆಗೆ ನಾಮಕರಣ ಮಾಡಲು ತುಳುನಾಡ ರಕ್ಷಣಾ ವೇದಿಕೆ ಒತ್ತಾಯ

ದಿನಾಂಕ 20-08-2025 ರಂದು ತುಳುನಾಡ ರಕ್ಷಣಾ ವೇದಿಕೆ ನಿಯೋಗ ಜಿಲ್ಲಾಧಿಕಾರಿ ಭೇಟಿ ಮಾಡಿ 1837 ರಲ್ಲಿ ಬ್ರಿಟಿಷರ ಅಟ್ಟಹಾಸ, ದಬ್ಬಾಳಿಕೆ, ದೌರ್ಜನ್ಯದ ವಿರುದ್ಧ ಸೆಟೆದು ನಿಂತವರು ಕೆಚ್ಚೆದೆಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರು. ಸುಳ್ಯದ ತನ್ನ ಮನೆ ಮದುವೆ ಗದ್ದೆಯಲ್ಲಿ ಬ್ರಿಟಿಷರ ತೆರಿಗೆ ಪಾವತಿ ನಿಯಮದ ವಿರುದ್ಧ ಸಮರ ಸಾರಲು ಬೇಕಾದ ಆಯುಧಗಳನ್ನು ಜೋಡಿಸಿ ಊರಿನ ರೈತರನ್ನು ಸೇರಿಸಿ ಅವರಿಗೆ ತರಬೇತಿ ನೀಡಿ ಯುದ್ಧಕ್ಕೆ ಸಿದ್ಧತೆ ಮಾಡಿಕೊಂಡು ಮಹಾದಂಡ ನಾಯಕ ಕೆದಂಬಾಡಿ ರಾಮಯ್ಯ ಗೌಡರು ತನ್ನ 2000 ಕ್ಕೂ ಅಧಿಕ ರೈತ ಸೇನಾನಿಗಳೊಂದಿಗೆ ತಮ್ಮ ಮನೆಯಿಂದ ಹೊರಟು ಬೆಳ್ಳಾರೆಯಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷರನ್ನು ಬಗ್ಗು ಬಡಿದು ಪುತ್ತೂರನ್ನು ವಶಪಡಿಸಿ, ಪಾಣೆಮಂಗಳೂರು ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡು ಮಂಗಳೂರನ್ನು ಆಕ್ರಮಿಸಿಕೊಂಡು ಮಂಗಳೂರಿನ ಬ್ರಿಟಿಷ್ ಆಡಳಿತ ಕೇಂದ್ರವಾದ ಬಾವುಟಗುಡ್ಡೆಯನ್ನು ಸಂಪೂರ್ಣ ವಶಪಡಿಸಿ ಏಪ್ರಿಲ್ 5, 1837 ರಂದು ಬ್ರಿಟಿಷರ ಧ್ವಜವನ್ನು ಕೆಳಗಿಳಿಸಿ ನಮ್ಮ ನೆಲದ ಕ್ರಾಂತಿಕಾರಿ ಬಾವುಟವನ್ನು ಅನಾವರಣ ಮಾಡಿ 13 ದಿನಗಳ ಕಾಲ ಸ್ವಾತಂತ್ರ ಸರಕಾರವನ್ನು ಕೆದಂಬಾಡಿ ರಾಮಯ್ಯ ಗೌಡರು ಮುನ್ನಡೆಸಿರುತ್ತಾರೆ. ಈ ದೇಶದ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಅವರ ತ್ಯಾಗ ಬಲಿದಾನಕ್ಕೆ ವಿಶೇಷವಾದ ಗೌರವವಿದೆ. ಈ ದೃಷ್ಟಿಯಿಂದ ಮಂಗಳೂರಿನಲ್ಲಿರುವ 100 ವರ್ಷಕ್ಕಿಂತಲೂ ಹಳೆಯ ಇದೀಗ ಮೇಲ್ದರ್ಜೆಗೆ ಏರಿರುವ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಚಿಕಿತ್ಸೆಗಾಗಿ ಬರುವ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ತುಳುನಾಡಿನ ಸಮರವೀರ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಹೆಸರನ್ನು ನಾಮಕರಣ ಮಾಡಿದಲ್ಲಿ ಅವರ ಶೌರ್ಯ, ತ್ಯಾಗ ಬಲಿದಾನಕ್ಕೆ ಮುಂದಿನ ಯುವ ಪೀಳಿಗೆಗೆ ಸ್ಪೂರ್ತಿಯಾಗಲಿದೆ.
ಹಾಗೂ
ಹದಿನಾರನೇ ಶತಮಾನದಲ್ಲಿ 4 ದಶಕಗಳ ಕಾಲ ಉಳ್ಳಾಲವನ್ನು ಆಳಿದ ರಾಣಿ ಅಬ್ಬಕ್ಕ ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ. ರಾಣಿ ಅಬ್ಬಕ್ಕ ಇಂದಿನ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪ್ರಾಂತ್ಯದ ಮೊದಲ ರಾಣಿ. ಅವರು ಕರಾವಳಿ ಕರ್ನಾಟಕದಲ್ಲಿ ಆಯಕಟ್ಟಿನ ಪ್ರದೇಶಗಳನ್ನು ಹೊಂದಿದ್ದ ತುಳುನಾಡನ್ನು ಆಳಿದ ಚೌಟ ರಾಜವಂಶಕ್ಕೆ ಸೇರಿದವರು ಚಿಕ್ಕಪ್ಪ ತಿರುಮಲರಾಯನು ಅಬ್ಬಕ್ಕಳಿಗೆ ಯುದ್ಧ ತಂತ್ರಗಳನ್ನು ಹಾಗೂ ಸೈನಿಕ ಕೌಶಲ್ಯವನ್ನು ಹೇಳಿಕೊಟ್ಟರು. ಅಬ್ಬಕ್ಕನ ಆಡಳಿತದಲ್ಲಿ ಹಿಂದೂಗಳು, ಮುಸ್ಲಿಮರು ಹಾಗೂ ಜೈನರು ಒಗ್ಗಟ್ಟಾಗಿದ್ದರು. ಅಬ್ಬಕ್ಕನ ಆಳ್ವಿಕೆಯ ಉಳ್ಳಾಲ ಸಾಮ್ರಾಜ್ಯದ ಬಂದರು ಪ್ರದೇಶವು ಸಮೃದ್ಧವಾಗಿತ್ತು. ಇದು ಹೊರ ಜಗತ್ತಿಗೆ ಮಸಾಲೆ ವ್ಯಾಪಾರದ ಕೇಂದ್ರವಾಗಿತ್ತು. ಪೋರ್ಚುಗೀಸರು ಈ ಬಂದರಿನ ಮೇಲೆ ಕಣ್ಣಿಟ್ಟಿದ್ದರು. ಈ ವಿಷಯ ರಾಣಿ ಅಬ್ಬಕ್ಕನಿಗೆ ತಿಳಿದು ಆಕೆ ಸ್ಥಳೀಯರನ್ನು ಒಗ್ಗೂಡಿಸಿ ಪೋರ್ಚುಗೀಸ್ ದಾಳಿಯನ್ನು ಹಿಮ್ಮೆಟ್ಟಿಸಿ ಸೈನ್ಯವನ್ನು ಮುನ್ನಡೆಸಿದ್ದು ಬಲು ರೋಚಕ ವಿಷಯ. ಶೌರ್ಯ ಹಾಗೂ ಧೈರ್ಯದಿಂದಾಗಿ “ಅಭಯ ರಾಣಿ” ಎಂಬ ಬಿರುದು ಪಡೆದಿದ್ದರು. 175 ವರ್ಷಕ್ಕೂ ಹಳೆಯದಾದ ಲೇಡಿಗೋಶನ್ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳಿದ್ದು ಕರ್ನಾಟಕ ಹಾಗೂ ಕೇರಳದ ಹಲವು ಜಿಲ್ಲೆಗಳಿಂದ ಪ್ರತಿನಿತ್ಯ ನೂರಾರು ಮಹಿಳಾ ರೋಗಿಗಳು ಹೆರಿಗೆಗಾಗಿ ಈ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ನಮ್ಮ ಮಕ್ಕಳಿಗೆ ವಿದೇಶಿ ಆಡಳಿತದ ವಿರುದ್ಧ ಯುದ್ಧ ಸಾರಿದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇದಲ್ಲದೆ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳು ರಾಣಿ ಅಬ್ಬಕ್ಕನಂತೆ ಶೌರ್ಯ, ಧೈರ್ಯಶಾಲಿಯಾಗಬೇಕೆಂದು ಪ್ರತಿ ಮಗುವಿನ ತಾಯಿಯ ಆಶಯವಾಗಿರುತ್ತದೆ. ಆದುದರಿಂದ ಈ ನಿಟ್ಟಿನಲ್ಲಿ ತಮ್ಮನ್ನು ಕೋರುವುದೇನೆಂದರೆ, ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಕೆದಂಬಾಡಿ ರಾಮಯ್ಯ ಗೌಡ ಹಾಗೂ ಲೇಡಿಗೋಶನ್ ಆಸ್ಪತ್ರೆಗೆ ರಾಣಿ ಅಬ್ಬಕ್ಕನ ಹೆಸರನ್ನು ನಾಮಕರಣ ಮಾಡಬೇಕೆಂದು ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ನೇತೃತ್ವದಲ್ಲಿ ಭೇಟಿ ಮಾಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಹಾಗೂ ಮಾನ್ಯ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವ, ವಿಧಾನಸಭಾ ಅಧ್ಯಕ್ಷರಿಗೆ ಕೂಡ ಪತ್ರ ಬರೆದು ಒತ್ತಾಯಿಸಿದ್ದಾರೆ. ತುಳುನಾಡ ರಕ್ಷಣಾ ವೇದಿಕೆ ನಿಯೋಗದಲ್ಲಿ ತುಳುನಾಡ ರಕ್ಷಣಾ ವೇದಿಕೆ ಮುಖಂಡರುಗಳಾದ ಪ್ರಶಾಂತ್ ಭಟ್ ಕಡಬ , ಕ್ಲಿಟಸ್ ಲೋಬೊ, ಮುನೀರ್ ಮುಕ್ಕಾಚೇರಿ, ಪ್ರಶಾಂತ್ ರೈ, ಮಹಿಳಾ ಮುಖಂಡರುಗಳಾದ. ಶಾರದಾ ಶೆಟ್ಟಿ , ಮಮತಾ ಗಟ್ಟಿ, ಸರ್ವ ಮಂಗಳ, ಸ್ವಾತಿ ಮತ್ತಿತರರು ಇದ್ದರು


