ಉಡುಪಿ: ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಸಾಹಿತಿ ಪ್ರೊ. ಅಮೃತ ಸೋಮೇಶ್ವರ ರವರ ಶ್ರದ್ಧಾಂಜಲಿ ಕಾರ್ಯಕ್ರಮವು ಉಡುಪಿಯ ಎಂ ಜಿ. ಎಂ ಕಾಲೇಜು ಬಳಿಯಲ್ಲಿರುವ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ಇಂದು (07-01-2024 ) ನಡೆಯಿತು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು ರವರು ಮಾತನಾಡುತ್ತಾ ಅಮೃತ ಸೋಮೇಶ್ವರ ಅವರು 1935ರ ಸೆಪ್ಟಂಬರ್ 27ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಕೋಟೆಕಾರು ಸಮೀಪದ ಅಡ್ಯ ಎಂಬಲ್ಲಿ ಜನಿಸಿದರು. ತಂದೆ ಚಿರಿಯಂಡ ಮತ್ತು ತಾಯಿ ಅಮುಣಿ. ಮಾತೃಭಾಷೆ ಮಲಯಾಳಂ ಆದರೂ ತುಳು ಹಾಗೂ ಕನ್ನಡದಲ್ಲಿ ಬರೆದರು.ಅಮೃತ ಸೋಮೇಶ್ವರ ಅವರ ಪ್ರಾರಂಭಿಕ ಶಿಕ್ಷಣ ಕೋಟೆಕಾರಿನ ಸ್ಟೆಲ್ಲಾ ಮೇರಿ ಕಾನ್ವೆಂಟ್ನಲ್ಲಿ, ಪ್ರೌಢಶಿಕ್ಷಣ ಆನಂದಾಶ್ರಮದಲ್ಲಿ, ಮತ್ತು ಪದವಿ ಶಿಕ್ಷಣ ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಾಯಿತು.
ಮದರಾಸು ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದು ತಾವು ಓದಿದ ಅಲೋಷಿಯಸ್ ಕಾಲೇಜಿನಲ್ಲಿಯೇ ಅಧ್ಯಾಪಕರಾಗಿ ಸೇರಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದ ನಂತರ ಪುತ್ತೂರಿನ ಸೇಂಟ್ ಫಿಲೋಮಿನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಂತರ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡು 1993ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಮಾಹಿತಿ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದರು. ಯಕ್ಷಗಾನದಲ್ಲಿ ಪ್ರಸಂಗ ಕರ್ತೃವಿಗೆ ಸ್ವಾತಂತ್ರ್ಯ ಕಡಿಮೆಯೆ. ಆದರೂ ಕಲೆಯ ಮೂಲಕ ವೈಚಾರಿಕತೆಯನ್ನೂ ಪ್ರತಿಪಾದಿಸಿ ಯಕ್ಷಗಾನ ಪ್ರಸಂಗಗಳಿಗೆ ಹೊಸ ಆಯಾಮ ನೀಡಿದರು. ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದ ಬಗ್ಗೆ ಒಲವು ಬೆಳೆದಿದ್ದು ಕಥೆ , ಕವನಗಳ ರಚನೆಗೆ ತೊಡಗಿಕೊಂಡು ಯಕ್ಷಗಾನ ಪ್ರಸಂಗವೊಂದನ್ನೂ ರಚಿಸಿದ್ದರು. ಅಮರ ಶಿಲ್ಪಿ ವೀರ ಕಲ್ಕುಡ, ಘೋರ ಮಾರಕ, ಸಹಸ್ರ ಕವಚ ಮೋಕ್ಷ, ಕಾಯಕಲ್ಪ, ಅಮರ ವಾಹಿನಿ, ತ್ರಿಪುರ ಮಥನ, ಆದಿಕವಿ ವಾಲ್ಮೀಕಿ, ಚಾಲುಕ್ಯ ಚಕ್ರೇಶ್ವರ ಮುಂತಾದ ಮೂವತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದು, ಪಾತ್ರಗಳ ರಚನೆಯಲ್ಲಿ ಹೊಸತನ ತುಂಬಿದ್ದರಿಂದ ಪ್ರಸಿದ್ಧ ಮೇಳಗಳಿಂದ ಯಕ್ಷಗಾನ ಕೃತಿಗಳಿಗೆ ನಿರಂತರ ಬೇಡಿಕೆ ಬಂತು. ‘ಯಕ್ಷಗಾನ ಕೃತಿ ಸಂಪುಟ’ ಇವರ ಜಾನಪದ ಯಕ್ಷಗಾನ ಸಂಶೋಧನೆಯ ಫಲವಾಗಿ ಮೂಡಿಬಂದ ಬಹು ಮೌಲಿಕ ಕೃತಿ.
ಯಾವುದೇ ಪಂಥಕ್ಕೂ ಸಿಲುಕದ ಅಮೃತ ಸೋಮೇಶ್ವರರು ಸುಮಾರು 100ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಇವರು ಹೊರತಂದ ಕಥಾಸಂಕಲನ ‘ಎಲೆಗಿಳಿ’ (1957). ನಂತರ ಬಂದ ಕಥಾ ಸಂಕಲನಗಳು ಕೆಂಪು ನೆನಪು, ರುದ್ರಶಿಲೆ ಸಾಕ್ಷಿ, ಮಾನವತೆ ಗೆದ್ದಾಗ ಮುಂತಾದವುಗಳು. ವನಮಾಲೆ, ಭ್ರಮಣ, ಉಪ್ಪುಗಳ್ಳಿ, ಜ್ಯೋತಿದರ್ಶನವಾಯಿತು ಮುಂತಾದವು ಕವನ ಸಂಕಲನಗಳು. ತೀರದ ತೆರೆ (ಕಾದಂಬರಿ), ಕೋಟಿಚನ್ನಯ್ಯ, ವಿಶ್ವರೂಪ (ನಾಟಕ),ನಂದಳಿಕೆ ನಂದಾದೀಪ ಹಾಗೂ ರಾಜರತ್ನಂ ಕವಿತೆಗಳು (ವಿಮರ್ಶಾಕೃತಿಗಳು).
ಅಮೃತ ಸೋಮೇಶ್ವರರು ತುಳುವಿನಲ್ಲಿಯೂ ಕೃತಿ ರಚಿಸಿದ್ದು ತಂಬಿಲ, ರಂಗೀತ (ತುಳು ಕವನ ಸಂಕಲನಗಳು); ತುಳು ಪಾಡ್ದನ ಕತೆಗಳು, ಅವಿಲು (ತುಳು ಜಾನಪದ ಕತೆಗಳು); ಅಪಾರ್ಥಿನಿ ಎಂಬ ಕುಚೋದ್ಯದ ಶಬ್ದಕೋಶವಲ್ಲದೆ ಫಿನ್ಲೆಂಡಿನ ಜಾನಪದ ಮಹಾಕಾವ್ಯವಾದ ‘ಕಾಲೇವಾಲ’ ವನ್ನೂ ತುಳುಭಾಷೆಗೆ ಅನುವಾದಿಸಿದ್ದಾರೆ. ಇವಲ್ಲದೆ ತುಳು ಭಾಷೆಯಲ್ಲಿ ಹಲವಾರು ರೇಡಿಯೋ ನಾಟಕಗಳು, ನೃತ್ಯ ರೂಪಕಗಳು, ಗಾದೆಗಳನ್ನೂ ರಚಿಸಿದ್ದಾರೆ. ಚಂದ್ರಶೇಖರ ಕಂಬಾರರ ಜೋಕುಮಾರ ಸ್ವಾಮಿ ನಾಟಕವನ್ನೂ ತುಳು ಭಾಷೆಗೆ ಅನುವಾದಿಸಿದ್ದು ಅದು ರಂಗದ ಮೇಲೂ ಪ್ರದರ್ಶನಗೊಂಡಿದೆ. ಸುಮಾರು 40ಕ್ಕೂ ಹೆಚ್ಚು ಭಕ್ತಿಗೀತೆ, ಭಾವಗೀತೆಗಳ ಧ್ವನಿಸುರುಳಿಗಳನ್ನೂ ತುಳು ಹಾಗೂ ಕನ್ನಡ ಭಾಷೆಗಳಲ್ಲಿ ತಂದಿದ್ದಾರೆ. ಯಕ್ಷಗಾನ ಕಲಾ ತಂಡವನ್ನು ಬಹರೈನ್, ದುಬಾಯ್ ದೇಶಗಳಿಗೆ ಕೊಂಡೊಯ್ದು ಯಕ್ಷಗಾನದ ಬಗ್ಗೆ ಅಭಿರುಚಿ ಬೆಳೆಯುವಂತೆ ಮಾಡಿದ್ದಾರೆ.
ಅಮೃತ ಸೋಮೇಶ್ವರರ ತುಳುಭಾಷೆ ಹಾಗೂ ಕನ್ನಡ ಸಾಹಿತ್ಯ ಸೇವೆಗಾಗಿ ಸಂದ ಪುರಸ್ಕಾರಗಳು ಹಲವಾರು. ‘ತುಳುನಾಡ ಕಲ್ಕುಡೆ’ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಯಕ್ಷಗಾನ ಕೃತಿ ಸಂಪುಟ’ಕ್ಕೆ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ‘ತುಳುಪಾಡ್ದನ ಕಥೆಗಳು’ ಕೃತಿಗೆ ಕೇಂದ್ರವಿದ್ಯಾ ಇಲಾಖೆಯ ಪ್ರಶಸ್ತಿ, ‘ತುಳುಪಾಡ್ದನ ಸಂಪುಟ’ಕ್ಕೆ ಕು.ಶಿ. ಹರಿವಾಸಭಟ್ಟ ಜಾನಪದ ಪ್ರಶಸ್ತಿ, ‘ಅಪಾರ್ಥಿನಿ’ ಕುಚೋದ್ಯ ಶಬ್ದ ಕೋಶಕ್ಕೆ ಆರ್ಯಭಟ ಪ್ರಶಸ್ತಿ, ಯಕ್ಷಗಾನದ ಕೊಡುಗೆಗಾಗಿ ‘ಪಾರ್ತಿಸುಬ್ಬ ಪ್ರಶಸ್ತಿ’ ಆಕಾಶವಾಣಿ ಬಹುಮಾನ, ತುಳು ಅಕಾಡಮಿ ಪ್ರಶಸ್ತಿ, ಕುಕ್ಕಿಲ ಪ್ರಶಸ್ತಿ, ನುಡಿಸಿರಿ ಪ್ರಶಸ್ತಿ, ಜಿಲ್ಲಾಗಣರಾಜ್ಯೋತ್ಸವ ಪ್ರಶಸ್ತಿ, ಕಾರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ ಮುಲ್ಕಿಯಲ್ಲಿ ನಡೆದ ಅಖಿಲ ಭಾರತ ತುಳುಸಮ್ಮೇಳನದ ಅಧ್ಯಕ್ಷತೆ, ಮುಂಬಯಿಯಲ್ಲಿ ನಡೆದ ಯಕ್ಷಗಾನ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಸಂದಿವೆ. ಜೊತೆಗೆ ಅಮೃತ್ ಸೋಮೇಶ್ವರ್ ಅವರಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಗೌರವ ಸಹಾ ಸಂದಿದೆ. ಸಾವಿರಾರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾಗಿ, ನೂರಾರು ವಿದ್ಯಾರ್ಥಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದವರು. ಅವರನ್ನು ತುಳುನಾಡಿನ ನಡೆದಾಡುವ ವಿಶ್ವಕೋಶವೆಂದೇ ಹೇಳಬಹುದು. ಅಂತಹ ಧೀಮಂತ ವ್ಯಕ್ತಿ ಯನ್ನು ನಾವು ಕಳೆದುಕೊಂಡದ್ದು ಸಮಾಜಕ್ಕೆ ತುಂಬಾಲಾರದ ನಷ್ಟ ಎಂದು ಯೋಗಿಶ್ ಶೆಟ್ಟಿ ಜಪ್ಪು ರವರು ತೀವ್ರ ಶೋಕ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಡುಪಿ ಜಿಲ್ಲಾ ವೀಕ್ಷಕರಾದ ಫ್ರಾಂಕಿ ಡಿಸೋಜ ಉಡುಪಿ ತಾಲೂಕು ಅಧ್ಯಕ್ಷ ಕೃಷ್ಣಕುಮಾರ್, ಗೌರವಾಧ್ಯಕ್ಷ ರವಿ ಆಚಾರ್ , ಉಪಾಧ್ಯಕ್ಷರುಗಳಾದ ಜಯರಾಮ ಪೂಜಾರಿ , ಉಮೇಶ್ ಶೆಟ್ಟಿ , ಸಲಹೆಗಾರರಾದ ಸುಧಾಕರ್ ಅಮೀನ್ , ಮಹಿಳಾ ಪ್ರಧಾನ ಕಾರ್ಯದರ್ಶಿ, ನಾಗಲಕ್ಷ್ಮಿ ಬ್ರಹ್ಮಾವರ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ರೋಷನ್ ಡಿಸೋಜಾ, ಆಟೋ ಘಟಕ ಅಧ್ಯಕ್ಷ ಅನಿಲ್ ಪೂಜಾರಿ , ಸುನಂದ , ಹೇಮಾನಳಿನಿ, ಗುಲಾಬಿ , ಶಾಂಭವಿ , ಗುಣವತಿ, ಸುಕನ್ಯ, ಪ್ರೀತಮ್ , ನಿತಿನ್ ಶೆಟ್ಟಿ , ಸ್ವಸ್ತಿಕ್ ,ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.