21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್ ಮಾರಾಟ ಮಾಡುವಂತಿಲ್ಲ: ದಿನೇಶ್ ಗುಂಡೂರಾವ್
ಬೆಂಗಳೂರು: ವಿಧಾನಸಭೆಯಲ್ಲಿಂದು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮನ) (ಕರ್ನಾಟಕ ತಿದ್ದುಪಡಿ) ವಿಧೇಯಕ ಅಂಗೀಕರಿಸಲಾಯಿತು.
ಈ ಕುರಿತು ಸದನದಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇನ್ಮುಂದೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್ ಮಾರಾಟ ಮಾಡುವಂತಿಲ್ಲ ಎಂದು ತಾಕೀತು ಮಾಡಿದರು.
ಈ ಹಿಂದೆ ಸಿಗರೇಟು ಮಾರಾಟ ವಯೋಮಿತಿಯನ್ನು 18 ವರ್ಷಕ್ಕೆ ನಿಗದಿಪಡಿಸಲಾಗಿತ್ತು, ಈಗ ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಹೆಚ್ಚಿಸಿದ್ದೇವೆ ಎಂದು ತಿಳಿಸಿದರು.
ಅಲ್ಲದೇ ಶಾಲೆಗಳಿಂದ 100 ಮೀಟರ್ ವ್ಯಾಪ್ತಿಯಲ್ಲಿ ಸಿಗರೇಟ್ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಮಾರಾಟ ಮಾಡುವರಿಗೆ ದಂಡದ ಪ್ರಮಾಣ 100 ರೂ. ನಿಂದ 1000 ರೂ. ಗೆ ಏರಿಕೆ ಮಾಡಿದ್ದೇವೆ ಎಂದು ತಿಳಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ನಿಮ್ಮ ನಿಲುವು ಸ್ವಾಗತಾರ್ಹವಾಗಿದೆ. ಆದ್ರೆ ಈ ಕಾನೂನು ಇನ್ನೂ 5 ವರ್ಷ ಹೀಗೇ ಇರುತ್ತೆ. ಆದ್ದರಿಂದ ದಂಡದ ಮೊತ್ತವನ್ನು 10,000 ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಸಿಗರೇಟ್ ಮಾಡುವವರು ಅದೊಂದನ್ನೇ ಮಾರಲ್ಲ. ಸಣ್ಣಪುಟ್ಟ ವ್ಯಾಪಾರಿಗಳಿರುತ್ತಾರೆ, ದಿನಸಿಯನ್ನೂ ಮಾರಾಟ ಮಾಡ್ತಿರ್ತಾರೆ. 10 ಸಾವಿರ ದಂಡ ಹಾಕಿದ್ರೆ ಸಮಸ್ಯೆಯಾಗುತ್ತೆ. ಆದ್ದರಿಂದ 1 ಸಾವಿರಕ್ಕೆ ಮಿತಿಗೊಳಿಸಿದ್ದೇವೆ. ಹುಕ್ಕಾ ಬಾರ್ ನಡೆಸೋರು ಶ್ರೀಮಂತರಿರ್ತಾರೆ. ಆದ್ದರಿಂದ ಅವರಿಗೆ 50,000 ರೂ. ನಿಂದ 1 ಲಕ್ಷ ರೂ.ವೆರೆಗೆ ದಂಡ ವಿಧಿಸುತ್ತೇವೆ ಎಂದು ಎಚ್ಚರಿಸಿದರು