ಬೆಂಗಳೂರು: ವೈದ್ಯಕೀಯ ತಪಾಸಣೆಯ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಖಾಸಗಿ ಚರ್ಮರೋಗ ತಜ್ಞನನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶನಿವಾರ ಸಂಜೆ ಅಶೋಕನಗರದ ಖಾಸಗಿ ಕ್ಲಿನಿಕ್ನಲ್ಲಿ ಈ ಘಟನೆ ನಡೆದಿದೆ. 22 ವರ್ಷದ ಯುವತಿ ತನ್ನ ತಂದೆಯೊಂದಿಗೆ ಚರ್ಮದ ಸಮಸ್ಯೆಗಾಗಿ ಚಿಕಿತ್ಸೆ ಪಡೆಯಲು ಭೇಟಿ ನೀಡಿದ್ದ ವೇಳೆ, ವೈದ್ಯ ಡಾ. ಪ್ರವೀಣ್ (ವಯಸ್ಸು 56) ತಪಾಸಣೆ ಸಂದರ್ಭದಲ್ಲಿ ಅನುಚಿತ ವರ್ತನೆ ನಡೆಸಿದ್ದಾರೆ ಎಂಬ ಆರೋಪ ದಾಖಲಾಗಿದೆ.
ಪೊಲೀಸರ ಪ್ರಕಾರ, ತಪಾಸಣೆ ಸಮಯದಲ್ಲಿ ವೈದ್ಯರು ಸುಮಾರು 30 ನಿಮಿಷಗಳ ಕಾಲ ಯುವತಿಗೆ ಅಸಭ್ಯವಾಗಿ ವರ್ತಿಸಿದ್ದು, ವೈದ್ಯಕೀಯ ತಪಾಸಣೆಯ ಹೆಸರಿನಲ್ಲಿ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದ್ದಾರೆ. ಯುವತಿ ವಿರೋಧಿಸಿದರೂ ವೈದ್ಯರು ಕಿರುಕುಳ ಮುಂದುವರಿಸಿದ್ದು, ನಂತರ ಖಾಸಗಿಯಾಗಿ ಭೇಟಿಯಾಗಲು ಹೋಟೆಲ್ ರೂಮ್ ಬುಕ್ ಮಾಡುವ ಮಾತು ಸಹ ನುಡಿದರೆಂದು ದೂರು ತಿಳಿಸುತ್ತದೆ.
ಘಟನೆಯ ನಂತರ ಯುವತಿ ತನ್ನ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದು, ಅವರು ಸ್ಥಳೀಯ ನಿವಾಸಿಗಳೊಂದಿಗೆ ಕ್ಲಿನಿಕ್ ಮುಂದೆ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ತಕ್ಷಣವೇ ಆಗಮಿಸಿದ ಪೊಲೀಸರು ವೈದ್ಯರನ್ನು ವಶಕ್ಕೆ ಪಡೆದರು.
ಡಾ. ಪ್ರವೀಣ್ ಆರೋಪಗಳನ್ನು ತಳ್ಳಿ ಹಾಕುತ್ತಾ, “ನನ್ನ ವರ್ತನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ” ಎಂದು ಹೇಳಿಕೆ ನೀಡಿದ್ದಾರೆ.
ಅಶೋಕನಗರ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಲೈಂಗಿಕ ಕಿರುಕುಳ) ಹಾಗೂ ಮಹಿಳೆಯ ಘನತೆಗೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಕೃತ್ಯ ಎಸಗಿದ ಪ್ರಕರಣದಡಿ FIR ದಾಖಲಿಸಿದ್ದು, ತನಿಖೆ ಮುಂದುವರಿಸುತ್ತಿದ್ದಾರೆ.



