ಬೊಂಡಾಲ: ‘ಯಕ್ಷಗಾನ ಬಯಲಾಟವನ್ನು ದೇವರ ಸೇವಾ ರೂಪವಾಗಿ ಆಡಿಸುವ ಸಂಪ್ರದಾಯ ಕರಾವಳಿಯಲ್ಲಿ ಬೆಳೆದು ಬಂದಿದೆ. ಇದರಿಂದ ನಮ್ಮ ಸಂಸ್ಕೃತಿಯ ಪುನರುತ್ಥಾನ ಸಾಧ್ಯ. ಅಲ್ಲದೆ ಈ ಸಂದರ್ಭದಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಸಮಾಜದ ಶ್ರೇಷ್ಠ ಕಾರ್ಯ’ ಎಂದು ಕರ್ನಾಟಕ ರಾಜ್ಯ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲ ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ ಸುವರ್ಣ ಸಂಭ್ರಮ ಪ್ರಯುಕ್ತ ಫೆ.15ರಂದು ನಡೆದ ಕಟೀಲು ಮೇಳದ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ‘ಯಕ್ಷಗಾನ ಕಲೆಯ ಬೆಳವಣಿಗೆಗಾಗಿ ರಾಜ್ಯಮಟ್ಟದ ಯಕ್ಷಗಾನ ಪ್ರಾಧಿಕಾರ ನಿರ್ಮಾಣಕ್ಕೆ ಸರಕಾರದ ನೆಲೆಯಲ್ಲಿ ಯತ್ನಿಸಲಾಗುವುದು’ ಎಂದವರು ನುಡಿದರು.
ಕಟೀಲು ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಮತ್ತು ಸಾಲಿಗ್ರಾಮ ಸೇರಿದಂತೆ ಬಹು ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಅವರಿಗೆ ಸುವರ್ಣೋತ್ಸವ ಗೌರವ ಪ್ರಶಸ್ತಿ ನೀಡಲಾಯಿತು. ಅಲ್ಲದೆ ಕಟೀಲು ಮೇಳದ ಕಲಾವಿದ ಮೋಹನ್ ಕುಮಾರ್ ಅಮ್ಮುಂಜೆ ಅವರಿಗೆ 2024 ನೇ ಸಾಲಿನ ‘ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ ಪ್ರಶಸ್ತಿ’ ಯನ್ನು ಪ್ರದಾನ ಮಾಡಲಾಯಿತು. ಯಕ್ಷಗಾನ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿ ಶುಭಾಶಂಸನೆ ಮಾಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದರು. ಪಳ್ಳಿ ಕಿಶನ್ ಹೆಗ್ಡೆ ಮತ್ತು ಅಮ್ಮುಂಜೆ ಮೋಹನ್ ಕುಮಾರ್ ಸನ್ಮಾನಿತರ ಪರವಾಗಿ ಮಾತನಾಡಿದರು.
ಊರ ಪ್ರಮುಖರಾದ ವಾಸುದೇವ ಕಾಮತ್ ನರಿಕೊಂಬು ಪದ್ಮನಾಭ ಮಯ್ಯ ಏಲಬೆ, ಬೊಂಡಾಲ ಸೀತಾರಾಮ ಶೆಟ್ಟಿ, ಸ್ವರ್ಣಲತಾ ಜಗನ್ನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದ ಸಮಿತಿ ಅಧ್ಯಕ್ಷ ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಬೊಂಡಾಲ ಅವರನ್ನು ಊರವರ ಪರವಾಗಿ ಅಭಿನಂದಿಸಲಾಯಿತು. ಶಿಲ್ಪಾ ಕಿಶನ್ ಹೆಗಡೆ ಮತ್ತು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ ಮತ್ತು ಸುವರ್ಣ ಸಂಭ್ರಮದ ಅಧ್ಯಕ್ಷ ಬಿ.ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿದರು. ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಸುನಾದ್ ರಾಜ್ ಶೆಟ್ಟಿ ಬೊಂಡಾಲ ಅಂತರಗುತ್ತು,ಸತೀಶ್ ಪಕ್ಕಳ ಇರಾ ಸನ್ಮಾನ ಪತ್ರ ವಾಚಿಸಿದರು. ಗೌರವಾಧ್ಯಕ್ಷ ಸೀತಾರಾಮ ಶೆಟ್ಟಿ ವಂದಿಸಿದರು. ಸಮಿತಿ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ಸಂಯೋಜಿಸಿದರು.
ಹಿರಿಯರಿಗೆ ಗೌರವಾರ್ಪಣೆ:
ಸುವರ್ಣ ಮಹೋತ್ಸವದ ಮೊದಲ ದಿನ ಫೆ. 14ರಂದು ಜರಗಿದ ಧಾರ್ಮಿಕ ಸಭೆಯಲ್ಲಿ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮತ್ತು ಕಟೀಲು ಕ್ಷೇತ್ರದ ವೇದಮೂರ್ತಿ ವೆಂಕಟರಮಣ ಆಸ್ರಣ್ಣ ಸಮಾರಂಭವನ್ನು ಉದ್ಘಾಟಿಸಿದರು. ಬಯಲಾಟವನ್ನು ಪ್ರಾರಂಭಿಸಿದ ಹಿರಿಯರ ಮನೆಯವರಿಗೆ, ಮೇಳದ ಕಲಾವಿದರಿಗೆ ಮತ್ತು ಸಂಘ – ಸಂಸ್ಥೆಗಳಿಗೆ ಈ ಸಂದರ್ಭದಲ್ಲಿ ಗೌರವಾರ್ಪಣೆ ಮಾಡಲಾಯಿತು. ಅಲ್ಲದೆ ಕಟಿಲಿನ ನಾಲ್ಕು ಮೇಳಗಳಿಗೆ ಬೆಳ್ಳಿಯ ಆಯುಧಗಳನ್ನು ಸಮರ್ಪಿಸಲಾಯಿತು.
ನರಿ ಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಮತ್ತು ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ರಂಗೋಲಿ ಮುಖ್ಯ ಅತಿಥಿಗಳಾಗಿದ್ದರು.
ಬೊಂಡಾಲ ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಬೊಂಡಾಲ ಸ್ವಾಗತಿಸಿ, ಪ್ರಸ್ತಾವನೆಗೆದರು. ಗೌರವಾಧ್ಯಕ್ಷ ಬೊಂಡಾಲ ಸೀತಾರಾಮ ಶೆಟ್ಟಿ, ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಸುವರ್ಣ ಸಂಭ್ರಮ ಅಧ್ಯಕ್ಷ ಪದ್ಮನಾಭ ಮಯ್ಯ ಏಲಬೆ ಉಪಸ್ಥಿತರಿದ್ದರು. ಕೋಶಾಧಿಕಾರಿ ಸುನಾದ್ ರಾಜ್ ಶೆಟ್ಟಿ ವಂದಿಸಿದರು.
ಸುವರ್ಣ ಸಂಭ್ರಮದ ಅಂಗವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಫೆ.14ರಿಂದ ಸತತ ಮೂರು ದಿನಗಳ ಯಕ್ಷಗಾನ ಸೇವಾ ಬಯಲಾಟ ಜರಗಿತು. ಕಟೀಲು ಕ್ಷೇತ್ರ ಮಹಾತ್ಮೆ, ಶ್ರೀ ದೇವಿ ಲಲಿತೋಪಖ್ಯಾನ ಮತ್ತು ಶ್ರೀದೇವಿ ಮಹಾತ್ಮೆ ಯಕ್ಷಗಾನಗಳು ಪ್ರದರ್ಶನಗೊಂಡವು.