ಕುಂದಾಪುರ: ಮಾಜಿ ಶಾಸಕ ಹಾಗೂ ಖ್ಯಾತ ಧಾರ್ಮಿಕ-ಸಾಮಾಜಿಕ ಮುಂದಾಳು ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಶನಿವಾರ ಬೆಳಿಗ್ಗೆ ವಯೋಸಹಜ ಅಸೌಖ್ಯದಿಂದ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಅಪ್ಪಣ್ಣ ಹೆಗ್ಡೆ ಅವರ ನಿಧನದಿಂದ ಜಿಲ್ಲೆಯಾದ್ಯಂತ ಶೋಕದ ವಾತಾವರಣ ಆವರಿಸಿದೆ.
ಅಪ್ಪಣ್ಣ ಹೆಗ್ಡೆ ಅವರು 1960ರಿಂದ 1983ರವರೆಗೆ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಧ್ಯಕ್ಷರಾಗಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿ, 1983ರಿಂದ 1994ರವರೆಗೆ ಶಾಸಕರಾಗಿ ಸೇವೆ ಸಲ್ಲಿಸಿ ಜನಸೇವೆ ಮೂಲಕ ಅಪಾರ ಗೌರವ ಗಳಿಸಿದ್ದರು. ಸರಳತೆ, ಶಿಸ್ತು ಮತ್ತು ಜನಪರ ಕಾರ್ಯಗಳಿಂದ ಅವರು ಸಾರ್ವಜನಿಕ ಜೀವನದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದ್ದರು.
ರಾಜಕೀಯದ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದ ಅವರು ತಾಲೂಕು ಸಹಕಾರಿ ಮಾರಾಟ ಸಂಘ ಹಾಗೂ ಭೂ ಅಭಿವೃದ್ಧಿ ಬ್ಯಾಂಕ್ನ ಉಪಾಧ್ಯಕ್ಷರಾಗಿ, ಬನ್ನೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ಬನ್ನೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಖ್ಯಸ್ಥರಾಗಿ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಭಕ್ತರ ನಂಬಿಕೆ ಮತ್ತು ಗೌರವಕ್ಕೆ ಪಾತ್ರರಾಗಿದ್ದರು.
ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ ನಿಧನವು ಕುಂದಾಪುರ ತಾಲೂಕು ಹಾಗೂ ಜಿಲ್ಲೆಯ ಸಾರ್ವಜನಿಕ ಜೀವನಕ್ಕೆ ತುಂಬಲಾರದ ನಷ್ಟವೆಂದು ಹಲವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ತುಳುನಾಡ ರಕ್ಷಣಾ ವೇದಿಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ
