ಮಂಗಳೂರು:
ಬ್ಯಾರಿ ಭಾಷೆ–ಸಾಹಿತ್ಯದ ಸಂರಕ್ಷಣೆ ಹಾಗೂ ವಿಕಸನಕ್ಕೆ ವೇದಿಕೆಯಾಗುವ ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನವನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಜನವರಿ 4ರಂದು ಮಂಗಳೂರು ತಾಲೂಕಿನ ಗುರುಪುರ ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ ಹಮ್ಮಿಕೊಂಡಿದೆ. ದಿನವಿಡೀ ಸಾಹಿತ್ಯ, ಸಂಸ್ಕೃತಿ ಮತ್ತು ಕಲಾ ಕಾರ್ಯಕ್ರಮಗಳೊಂದಿಗೆ ಸಮ್ಮೇಳನ ನಡೆಯಲಿದೆ.
ಸಮ್ಮೇಳನದ ಅಂಗವಾಗಿ ಬೆಳಿಗ್ಗೆ 9.30ಕ್ಕೆ ಗುರುಪುರ ಕೈಕಂಬದ ಸಬೀಲುಲ್ ಹುದಾ ಅಲ್ಬಿರ್ರ್ ಶಾಲಾ ವಠಾರದಿಂದ ಸಭಾಂಗಣದವರೆಗೆ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಯನ್ನು ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಹಾಜಿ ಎಂ.ಹೆಚ್. ಮೊಹಿದಿನ್ ಅಡ್ಡೂರು ಉದ್ಘಾಟಿಸಲಿದ್ದು, ಬೆಳಿಗ್ಗೆ 10.00ಕ್ಕೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಹೆಚ್. ಧ್ವಜಾರೋಹಣ ನೆರವೇರಿಸಲಿದ್ದಾರೆ.
ಬೆಳಿಗ್ಗೆ 10.15ಕ್ಕೆ ನಡೆಯುವ ಉದ್ಘಾಟನಾ ಸಮಾರಂಭವನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಸಮ್ಮೇಳನಾಧ್ಯಕ್ಷರಾಗಿ ಭಾಷಣ ಮಾಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಹೆಚ್. ವಹಿಸಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲೇ ಬ್ಯಾರಿ ಸಾಹಿತ್ಯಕ್ಕೆ ಹೊಸ ಸೇರ್ಪಡೆಗಳಾಗಿ ಐದು ಕೃತಿಗಳು ಬಿಡುಗಡೆಗೊಳ್ಳಲಿವೆ. ಶಮೀಮಾ ಕುತ್ತಾರ್ ಅವರ ‘ಪಡಿಞ್ಞಾರ್ರೊ ಪೂ’ (ಕಥಾಸಂಕಲನ), ಹಸೀನ ಮಲ್ನಾಡ್ ಅವರ ‘ಮಿನ್ನಾಂಪುಲು’ (ಹನಿಗವನ ಸಂಕಲನ), ಎನ್.ಎಂ. ಹನೀಫ್ ನಂದರಬೆಟ್ಟು ಅವರ ‘ಸಂಪುಕಾತ್’, ಬಶೀರ್ ಅಹ್ಮದ್ ಬೆಳ್ಳಾಯಿರು ಅವರ ‘ಬೆಲ್ಚ’ ಹಾಗೂ ಹೈದರಲಿ ಕಾಟಿಪಳ್ಳ ಅವರ ‘ನಸೀಅತ್’ ಕವನ ಸಂಕಲನಗಳು ಲೋಕಾರ್ಪಣೆಗೊಳ್ಳಲಿವೆ.
ಮಧ್ಯಾಹ್ನ 12.00ಕ್ಕೆ ಸಮ್ಮೇಳನಾಧ್ಯಕ್ಷರ ಭಾಷಣದ ಕುರಿತು ಚರ್ಚಾಗೋಷ್ಠಿ ನಡೆಯಲಿದ್ದು, ಪ್ರಾಧ್ಯಾಪಕ ಹೈದರ್ ಅಲಿ, ಪತ್ರಕರ್ತ ಏ.ಕೆ. ಕುಕ್ಕಿಲ, ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಮತ್ತು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯೆ ಹಫ್ಸಾ ಬಾನು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್ ಚರ್ಚಾಗೋಷ್ಠಿಯನ್ನು ನಿರೂಪಿಸಲಿದ್ದಾರೆ.
ಮಧ್ಯಾಹ್ನ 2.00ಕ್ಕೆ ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರು ಅವರ ಅಧ್ಯಕ್ಷತೆಯಲ್ಲಿ ಬ್ಯಾರಿ ಕವಿಗೋಷ್ಠಿ ನಡೆಯಲಿದ್ದು, ವಿವಿಧ ಭಾಗಗಳಿಂದ ಆಗಮಿಸಿರುವ ಕವಿಗಳು ತಮ್ಮ ಕವನಗಳನ್ನು ಮಂಡಿಸಲಿದ್ದಾರೆ. ಮಧ್ಯಾಹ್ನ 3.00ಕ್ಕೆ ಆಳ್ವಾಸ್ ಕಾಲೇಜು ಮೂಡಬಿದರೆಯ ದಫ್ ತಂಡ ಹಾಗೂ ಬ್ಯಾರಿ ಹಾಡುಗಾರರ ತಂಡದಿಂದ ಸಾಂಸ್ಕೃತಿಕ ಸಂಗೀತ ಸಂಭ್ರಮ ನಡೆಯಲಿದೆ.
ಸಂಜೆ 4.00ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬ್ಯಾರಿ ಸಾಹಿತ್ಯ, ಸಮಾಜ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಲವು ಸಾಧಕರಿಗೆ ಸನ್ಮಾನ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಮಾರೋಪ ಭಾಷಣವನ್ನು ಬ್ಯಾರಿ ಇನ್ಫೋ.ಕಾಂನ ಮುಖ್ಯಸ್ಥ ಬಿ.ಎ. ಮುಹಮ್ಮದ್ ಅಲಿ ಮಾಡಲಿದ್ದು, ಅಧ್ಯಕ್ಷತೆಯನ್ನು ಉಮರ್ ಯು.ಹೆಚ್. ವಹಿಸಲಿದ್ದಾರೆ.
ಸಂಜೆ 6.30ರಿಂದ ರಾತ್ರಿ 8.00ರವರೆಗೆ ಚಲನಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ ‘ಬ್ರೋಕರ್ ಪೋಕರ್’ ಬ್ಯಾರಿ ನಾಟಕ ಹಾಗೂ ಗುರುಪುರದ ಎಂ.ಜಿ.ಎಂ. ತಾಲೀಮು ತಂಡದ ಪ್ರದರ್ಶನ ಸಮ್ಮೇಳನದ ಆಕರ್ಷಣೆಯಾಗಲಿದೆ.
ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Trending
- INDIA through my EYES’ ಚಿತ್ರಕಲಾ ಸ್ಪರ್ಧೆಯಲ್ಲಿ ಚಿನ್ಮಯಿ ಎಸ್. ವಿಜೇತೆ
- ಕರಂಬಾರು ಶಾಲೆಯಲ್ಲಿ ಸಂಭ್ರಮ ಸಡಗರದಿಂದ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ
- ಕೋರ್ದಬ್ಬು ದೈವದ ಪಾತ್ರಿ ಸೀನ ಪಾತ್ರಿ ನಂದಿಕೂರು ಮೆರೆಗ್ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ದ “ತುಳುವಾಲ ಕುಲಸಿರಿ – 2026” ಪ್ರಶಸ್ತಿ ಘೋಷಣೆ
- ಪುತ್ತೂರಿನ ಸಾನ್ವಿತಾ ಎಂ. ರೈ ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆ
- ಗ್ರೀನ್ ವ್ಯೂ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ
- ಮಂಗಳೂರಿನ ಸಿಟಿ ಸೆಂಟರ್ KFC ಮಳಿಗೆಯಲ್ಲಿ 9 ತಿಂಗಳ ಹಿಂದಿನ ಮಾಂಸ ಪತ್ತೆ: ಆರೋಗ್ಯಾಧಿಕಾರಿಗಳಿಂದ ಮಳಿಗೆಗೆ ಬೀಗ
- ತಲ್ಲೂರಿನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ: ಆಟೋ ಚಾಲಕರಿಗೆ ಸಿಹಿ ವಿತರಣೆ, ಶೇ.90 ಅಂಕ ಗಳಿಸಿದ ಸ್ಪಂದಿತ ಪೂಜಾರಿಗೆ ಡಾ. ರವೀಂದ್ರ ತಲ್ಲೂರು ಅವರಿಂದ ಸನ್ಮಾನ
- ಡಿ.ಕೆ. ಯೂಸ್ಡ್ ವೆಹಿಕಲ್ ಡೀಲರ್ಸ್ ಅಸೋಸಿಯೇಷನ್ನ ನೂತನ ಕಾನೂನು ಸಲಹೆಗಾರರಾಗಿ ಶ್ರೀ ಸಿನಾನ್ ಸಿದ್ದೀಕ್ ನೇಮಕ
