ಮಂಗಳೂರು, ಜುಲೈ 1: ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದ ನಾಗೋರಿ ಪ್ರದೇಶದಲ್ಲಿ ಭಾರೀ ಮಳೆಯ ಪರಿಣಾಮ ಸಂಭವಿಸಿದ ಗೋಡೆ ಕುಸಿತದ ಪರಿಣಾಮ ಮನೆ ಬಾಗಶಃ ಬಿದ್ದು ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ದುರಂತದ ಹಿನ್ನೆಲೆಯಲ್ಲಿ ಜನತಾದಳ (ಜಾತ್ಯತೀತ) ಪಕ್ಷದ ನಿಯೋಗವು ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿತು.
ದುರಂತದಲ್ಲಿ ಮಹಿಳೆಯೊಬ್ಬರು ಹಾಗೂ ಇಬ್ಬರು ಬಾಲಕಿಯರು ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ದುರಂತದಲ್ಲಿ ಗಾಯಗೊಂಡಿರುವವರು ಶೀಘ್ರ ಗುಣಮುಖರಾಗಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಕ್ಷದ ಮುಖಂಡರು ಪ್ರಾರ್ಥಿಸಿದರು. ಮೃತರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಸಂತಾಪ ಸೂಚಿಸಿದರು.
ಭೇಟಿ ಬಳಿಕ ಮಾತನಾಡಿದ ಜೆಡಿಎಸ್ ಮುಖಂಡರುಗಳು ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಸಂದರ್ಭಗಳಲ್ಲಿ ಭೂಕುಸಿತ, ಗುಡ್ಡ ಕುಸಿತ . ಮನೆಕುಸಿತ ಹಾಗೂ ನೆರೆ ಅವಾಂತರಗಳು ಮರುಕಳಿಸುತ್ತಿದ್ದು, ಅಪಾಯದ ಪ್ರದೇಶಗಳನ್ನು ಮುಂಚಿತವಾಗಿ ಗುರುತಿಸಿ ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಜಿಲ್ಲಾಡಳಿತ ಇನ್ನಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಬೇಕಾಗಿದೆ ಎಂದು ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಜಪ್ಪು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಕ್ಷವು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿ ಕೆಳಕಂಡ ಬೇಡಿಕೆಗಳನ್ನು ಮುಂದಿರಿಸಿತು:
• ಮೃತರ ಕುಟುಂಬಕ್ಕೆ ತಕ್ಷಣವೇ ಸಮರ್ಪಕ ಪರಿಹಾರ ಹಾಗೂ ಅಗತ್ಯ ಪುನರ್ವಸತಿ ಸೌಲಭ್ಯಗಳನ್ನು ಒದಗಿಸಬೇಕು.
• ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು.
• ಜಿಲ್ಲೆಯ ಎಲ್ಲಾ ಭೂಕುಸಿತ ಅಪಾಯ ಪ್ರದೇಶಗಳ ವೈಜ್ಞಾನಿಕ ಸಮೀಕ್ಷೆ ನಡೆಸಿ, ಅಪಾಯಕಾರಿ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳನ್ನು ಮುಂಗಡವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು.
• ಮುಂಗಾರು ಅವಧಿಯಲ್ಲಿ ಅಪಾಯದ ಪ್ರದೇಶಗಳ ಮೇಲೆ ನಿರಂತರ ನಿಗಾವಹಿಸಿ, ಜೀವಹಾನಿ ತಪ್ಪಿಸಲು ಶಾಶ್ವತ ವಿಪತ್ತು ನಿರ್ವಹಣಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.
“ಒಂದೇ ಘಟನೆಯಲ್ಲಿ ಮೂವರು ಮೃತಪಟ್ಟಿರುವ ಈ ದುರಂತ ಇಡೀ ಮಂಗಳೂರು ನಗರವನ್ನು ತೀವ್ರ ಶೋಕದಲ್ಲಿ ಮುಳುಗಿಸಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ದೀರ್ಘಕಾಲಿಕ ಹಾಗೂ ವೈಜ್ಞಾನಿಕ ಕ್ರಮಗಳನ್ನು ಕೈಗೊಂಡು ಮಾನವ ಜೀವಗಳ ರಕ್ಷಣೆಗೆ ಅತ್ಯುನ್ನತ ಆದ್ಯತೆ ನೀಡಬೇಕು
ದುರಂತ ಸ್ಥಳಕ್ಕೆ ಭೇಟಿ ನೀಡಿದ ಜೆಡಿಎಸ್ ನಿಯೋಗದಲ್ಲಿ ರಾಜ್ಯ ಮೀನುಗಾರರ ಘಟಕದ ಅಧ್ಯಕ್ಷ ರತ್ನಾಕರ ಸುವರ್ಣ,ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಜಿಲ್ಲಾ ಕಾರ್ಯಾಧ್ಯಕ್ಷ ಶಶಿರಾಜ್ ಶೆಟ್ಟಿ, ಪ್ರಶಾಂತ್ ಭಟ್ ಕಡಬ ಸೇರಿದಂತೆ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.
