ಜಾರ್ಖಂಡ್/ಬಿಹಾರ್: ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಅವರು ನವೆಂಬರ್ 27ರಿಂದ ಆರಂಭಿಸಿದ ಐದು ದಿನಗಳ ತೀರ್ಥಯಾತ್ರೆಯ ಅಂಗವಾಗಿ ರಾಂಚಿಯಿಂದ ಜೈನರ ಶಾಶ್ವತ ಸಿದ್ದ ಕ್ಷೇತ್ರವಾದ ಸಮ್ಮೇದ ಶಿಖರ್ಜಿಗೆ ಆಗಮಿಸಿ ನವೆಂಬರ್ 28ರ ಬೆಳಿಗ್ಗೆ 27 ಕಿಮೀ ಪರ್ವತ ಪರಿಕ್ರಮೆಯ 20 ಕೂಟಗಳಲ್ಲಿ ತೀರ್ಥಂಕರರ ಚರಣದರ್ಶನಮಾಡಿದರು.
ಅಪರಾಹ್ನ ನಡೆದ ಬೀಸ್ ಪಂಥಿ ಕೋಠಿಯ ಸಿದ್ಧ ಚಕ್ರ ವಿಧಾನದಲ್ಲಿ ಸ್ವಾಮೀಜಿ ಉಪಸ್ಥಿತರಿದ್ದು, ನಡೆದ ಧಾರ್ಮಿಕ ಸಭೆಯಲ್ಲಿ ಆಚಾರ್ಯ ಗಿರಿ ನಾರಸಾಗರ್ ಹಾಗೂ ಸಂಘದ ಮುನಿಗಳು ಭಾಗವಹಿಸಿದರು. ಮೂಡುಬಿದಿರೆ ಸ್ವಾಮೀಜಿಯವರನ್ನು ಅಧ್ಯಕ್ಷ ಅಜಯ್ ಬಾಬು (ಅರಾ) ಪಾದಪೂಜೆ ಮಾಡಿ ಗೌರವಿಸಿದರು.
ಗುಣಯತನ ತೀರ್ಥಕ್ಷೇತ್ರದಲ್ಲಿ, 108 ಮುನಿ ಸಮತಾ ಸಾಗರ್ ಮತ್ತು ಉಡುಪಿ ಜಿಲ್ಲೆಯ ಬಸರೂರ್ ಮೂಲದ ಆಚಾರ್ಯ 108 ಶಂಭವ ಸಾಗರ್ ಮುಂತಾದ ಮಹಾಸನ್ಯಾಸಿಗಳು ಸಭೆಯಲ್ಲಿ ಸೇರಿಕೊಂಡರು.
ಶಿಖರ್ಜಿ ಅದಿನಾಥ ಸ್ವಾಮಿ ಪಂಚಕಲ್ಯಾಣ ಸಮಾರಂಭದ ಎರಡನೇ ದಿನದ ಕಾರ್ಯಕ್ರಮದಲ್ಲಿ ಆಚಾರ್ಯ ತನ್ಮಯ ಸಾಗರ್ ಮುನಿ ಮಹಾರಾಜ್ ಮೂಡುಬಿದಿರೆ ಸ್ವಾಮೀಜಿಯನ್ನು ಗೌರವಿಸಿ ಆಶೀರ್ವಾದಿಸಿದರು.
ಈ ಸಂದರ್ಭದಲ್ಲಿ ದೀಕ್ಷಾ–ಸನ್ಯಾಸದ ಮಹತ್ವದ ಕುರಿತು ಮಾತನಾಡಿದ ಚಾರುಕೀರ್ತಿ ಸ್ವಾಮೀಜಿ,
“ಮಾನವ ಜೀವನದಲ್ಲಿ ಗೃಹಸ್ಥ–ಸನ್ಯಾಸ ಎಂಬ ಎರಡು ಮಾರ್ಗಗಳಿದ್ದು, ಸಂಚಿತ ಕರ್ಮಗಳನ್ನು ನಾಶಮಾಡಿ ಮುಕ್ತಿ ಸಾಧಿಸಲು ಸನ್ಯಾಸಧರ್ಮಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ” ಇದೆ ಎಂದು ನುಡಿದರು.
ಮನೋಜ್ ಜೈನ್, ಪಂಡಿತ್ ಪ್ರದೀಪ್, ಮಹೇಶ್ ಪಂಡಿತ್, ದಿಲೀಪ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತದನಂತರ ಸ್ವಾಮೀಜಿ, ಜಾರ್ಖಂಡ್ನ ಇಟ್ಕೋರಿ–ಬದ್ಧಲ್ಪುರ್ ಕ್ಷೇತ್ರಗಳಲ್ಲಿ ಶೀತಲ್ನಾಥ ತೀರ್ಥಂಕರರ ಜನ್ಮಭೂಮಿಯ ಜೊತೆಗೆ ಜೈನ–ಹಿಂದೂ–ಬೌದ್ಧ ಧರ್ಮಗಳ ತ್ರಿವೇಣಿ ಸಂಗಮ ಪ್ರದೇಶಗಳ ದರ್ಶನ ಮಾಡಿದರು.
