ಮಂಗಳೂರಿಗೆ ಬೆಂಗಳೂರಿನಿಂದ MDMA ಮಾದಕ ವಸ್ತು ತಂದು ಸ್ಥಳೀಯ ಡ್ರಗ್ ಪೆಡ್ಲರ್ಗಳಿಗೆ ಸರಬರಾಜು ಮಾಡುತ್ತಿದ್ದ ಸಂಘಟಿತ ತಂಡವನ್ನು ಮಂಗಳೂರು ನಗರ ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇದಿಸಿದ್ದಾರೆ.
ಡಿ.13ರಂದು ಕಾರಿನಲ್ಲಿ ಸಾಗುತ್ತಿದ್ದ ತಂಡವನ್ನು ಅರ್ಕುಳ ಬಳಿ ವಶಕ್ಕೆ ಪಡೆದ ಪೊಲೀಸರು, ಮಲ್ಲೂರು ನಿವಾಸಿ ಅಹಮ್ಮದ್ ಶಾಬೀತ್ (35), ಬಂಟ್ವಾಳ ನಿವಾಸಿ ಮಹಮ್ಮದ್ ಶಂಶೀರ್ (36) ಹಾಗೂ ಬಂಟ್ವಾಳದ ನಿವಾಸಿ ನೌಶೀನ (27) ಅವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು 90 ಗ್ರಾಂ MDMA ಮಾದಕ ವಸ್ತು, ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಕಾರು (KL-58-W-6342) ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಅಹಮ್ಮದ್ ಶಾಬೀತ್ ಬೆಂಗಳೂರಿನಿಂದ ನಿರಂತರವಾಗಿ MDMA ತಂದು ಮಂಗಳೂರಿನ ಡ್ರಗ್ ಪೆಡ್ಲರ್ಗಳಿಗೆ ಪೂರೈಕೆ ಮಾಡುತ್ತಿದ್ದನು. ಶಂಕೆ ತಪ್ಪಿಸಲು ಮಹಿಳೆಯನ್ನು ಜೊತೆಗೆ ಇರಿಸಿಕೊಂಡು ಸಾಗಾಟ ನಡೆಸುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ.
ಖಚಿತ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ತಂಡ ಆರೋಪಿಗಳನ್ನು ಬಂಧಿಸಿ, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
