ಪುತ್ತೂರು: ಹೈಕೋರ್ಟ್ ನಿರ್ದೇಶನದ ಮೇರೆಗೆ ನಗರದಲ್ಲಿರುವ ಕೋವಿ (ಬಂದೂಕು) ಠೇವಣಾತಿ ಕೇಂದ್ರದ ಮೇಲೆ ಶುಕ್ರವಾರ ಅಧಿಕಾರಿಗಳ ತಂಡ ದಾಳಿ ನಡೆಸಿ 1500ಕ್ಕೂ ಅಧಿಕ ಕೋವಿಗಳನ್ನು ಪತ್ತೆ ಹಚ್ಚಿದೆ. ಉಪವಿಭಾಗಾಧಿಕಾರಿ (ಎಸಿ) ಸ್ಟೆಲ್ಲಾ ವರ್ಗೀಸ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 83ರ ಅಡಿ ತನಿಖೆ ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.
ನಗರ ಪೊಲೀಸ್ ಠಾಣೆ ಸಮೀಪದ ದೇವಕಿಕೃಪಾ ಕಟ್ಟಡದ ಮೇಲಂತಸ್ತಿನ ಎರಡು ಕೊಠಡಿಗಳು ಹಾಗೂ ಪಕ್ಕದ ಎಸ್ಬಿಬಿ ಟವರ್ನ ಒಂದು ಕೊಠಡಿಯಲ್ಲಿ ಈ ಬಂದೂಕುಗಳನ್ನು ದಾಸ್ತಾನು ಮಾಡಲಾಗಿತ್ತು. ಶುಕ್ರವಾರ ಮಧ್ಯಾಹ್ನ ಮತ್ತು ಸಂಜೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಎಸಿ, ಕೋವಿ ಠೇವಣಿ ಇರಿಸಲಾಗಿದ್ದ ಕೊಠಡಿಗಳನ್ನು ಸೀಲ್ ಮಾಡಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಸಿ ಸ್ಟೆಲ್ಲಾ ವರ್ಗೀಸ್, “ಪರಿಶೀಲನೆ ವೇಳೆ ಕೇಂದ್ರದಲ್ಲಿ 1500ಕ್ಕೂ ಹೆಚ್ಚು ಕೋವಿಗಳು ಪತ್ತೆಯಾಗಿವೆ. ಜೊತೆಗೆ ಇರುವ ಮದ್ದುಗುಂಡುಗಳ ನಿಖರ ಪ್ರಮಾಣದ ಕುರಿತು ಎರಡು ದಿನಗಳೊಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಈ ಕೇಂದ್ರದ ಪರವಾನಗಿ ಗೋಪಾಲಕೃಷ್ಣ ಭಟ್ ಹಾಗೂ ವಿವೇಕಾನಂದ ಭಟ್ ಅವರ ಹೆಸರಿನಲ್ಲಿ ಇರುವುದಾಗಿ ಪ್ರಾಥಮಿಕ ಮಾಹಿತಿ ದೊರೆತಿದ್ದು, ಸಮಗ್ರ ಪರಿಶೀಲನೆ ನಡೆಯಲಿದೆ” ಎಂದು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪುತ್ತೂರು ತಹಶೀಲ್ದಾರ್ ಎಸ್.ಬಿ. ಕೂಡಲಗಿ, ವಾಣಿಜ್ಯ ತೆರಿಗೆ ಅಧಿಕಾರಿ ಮಂಜುನಾಥ್, ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜ, ಕಂದಾಯ ಅಧಿಕಾರಿ ದಯಾನಂದ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಾಥಮಿಕ ತನಿಖೆಯಲ್ಲಿ ಸುಮಾರು 40 ವರ್ಷಗಳ ಹಿಂದಿನ ಬಂದೂಕುಗಳೂ ಈ ಕೇಂದ್ರದಲ್ಲಿ ಇರುವುದಾಗಿ ತಿಳಿದು ಬಂದಿದೆ. ಕಟ್ಟಡ ಹಾಗೂ ಠೇವಣಾತಿ ಕೊಠಡಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳು ಲಭ್ಯವಾಗಿಲ್ಲ. ಪರವಾನಗಿಯಲ್ಲಿ ನಮೂದಿಸಿದ ಕೊಠಡಿಗಳಿಗಿಂತ ಹೆಚ್ಚಿನ ಕೊಠಡಿಗಳಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿರುವುದು ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ.
ಘಟನೆ ಕುರಿತು ಮುಂದಿನ ತನಿಖೆ ಮುಂದುವರಿದಿದೆ.
