ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಅನಧಿಕೃತವಾಗಿ ಆಹಾರ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ನಗರಸಭೆ ಪೌರಾಯುಕ್ತ ಮಹಾಂತೇಶ್ ಎಚ್ಚರಿಸಿದ್ದಾರೆ.
ರಸ್ತೆ ಚರಂಡಿ, ಶಾಲಾ ವಠಾರ, ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ನಾಯಿಗಳಿಗೆ ಆಹಾರ ಹಾಕುವುದು ನಿಷೇಧವಾಗಿದೆ. ಈ ನಿಯಮ ಉಲ್ಲಂಘಿಸಿದರೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹಾಗೆಯೇ ಸಾಕು ನಾಯಿಗಳನ್ನು ಅಥವಾ ಅವುಗಳ ಮರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟುಹೋಗುವವರ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮನೆಗಳಲ್ಲಿ ನಾಯಿಗಳನ್ನು ಸಾಕುವವರು ನಾಯಿಗಳಿಗೆ ರೇಬಿಸ್ ಲಸಿಕೆ ಹಾಗೂ ಸಂತಾನಹರಣ ಶಸ್ತ್ರಚಿಕಿತ್ಸೆ ಕಡ್ಡಾಯವಾಗಿ ಮಾಡಿಸಬೇಕು ಎಂದು ಪೌರಾಯುಕ್ತರು ತಿಳಿಸಿದ್ದಾರೆ. ಜೊತೆಗೆ ಸಾಕು ನಾಯಿಗಳಿಗೆ ಗುರುತುಪಟ್ಟಿ (ಬೆಲ್ಟ್) ಅಳವಡಿಸಬೇಕಾಗಿದೆ.
ಆಹಾರ ಹಾಕಲು ಗುರುತಿಸಿದ ಸ್ಥಳಗಳು
ಬೀದಿ ನಾಯಿಗಳಿಗೆ ಆಹಾರ ಹಾಕಲು ನಗರಸಭೆ ನಿಗದಿಪಡಿಸಿದ ಸ್ಥಳಗಳು —
• ಬೀಡಿನ ಗುಡ್ಡೆ ಹಿಂದೂ ರುದ್ರಭೂಮಿ ಎದುರುಗಡೆ
• ಆದಿ ಉಡುಪಿ ಮಾರುಕಟ್ಟೆ ಹಿಂಬದಿ
• ಇಂದ್ರಾಳಿ ಹಿಂದೂ ರುದ್ರಭೂಮಿ ಎದುರುಗಡೆ
• ಪರ್ಕಳ ಸ್ವಾಗತ ಗೋಪುರ ಹತ್ತಿರ
• ನಿಟ್ಟೂರು ಕೊಳಚೆ ನೀರು ಶುದ್ಧೀಕರಣ ಘಟಕ ಎದುರುಗಡೆ
• ಪೆರಂಪಳ್ಳಿ ಮುಖ್ಯ ರಸ್ತೆ (ಭಾರತೀಯ ವಿಕಾಸ ಟ್ರಸ್ಟ್ ಕೆಳಗಡೆ)
• ರಾಜ್ ಫಿಶ್ ಮಿಲ್ ಹತ್ತಿರ
• ಆದಿ ಉಡುಪಿ–ಮಲ್ಪೆ ರಸ್ತೆಯ ಹೆಲಿಪ್ಯಾಡ್ ಹತ್ತಿರ
• ಕಕ್ಕುಂಜೆ ನಾರಾಯಣನಗರ ಮಾರ್ಗದ ತಿರುವು ಬಳಿ
• ಬೈಲೂರು ಹನುಮಾನ್ ಗ್ಯಾರೇಜ್–ಡಯಾನ ರಸ್ತೆ ವಿಜಯ ವೀರ ಸಂಘ ಹತ್ತಿರ
ಈ ಗುರುತಿಸಿದ ಸ್ಥಳಗಳ ಹೊರತಾಗಿ ಬೇರೆಡೆ ನಾಯಿಗಳಿಗೆ ಆಹಾರ ಹಾಕಲು ಬಯಸುವವರು ನಗರಸಭಾ ಕಛೇರಿಗೆ ಲಿಖಿತ ಮನವಿ ಸಲ್ಲಿಸಿ ಅನುಮತಿ ಪಡೆಯಬೇಕು.
ಗುರುತಿನ ಚೀಟಿ ಕಡ್ಡಾಯ
ಬೀದಿ ನಾಯಿಗಳಿಗೆ ಆಹಾರ ಹಾಕಲು ಬಯಸುವವರು ನಗರಸಭೆಯಿಂದ ಗುರುತಿನ ಚೀಟಿ ಹಾಗೂ ಅಧಿಕೃತ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಜೊತೆಗೆ ಆಹಾರ ಹಾಕುವವರು ನಾಯಿಗಳಿಗೆ ರೇಬಿಸ್ ಲಸಿಕೆ ಹಾಗೂ ಸಂತಾನಹರಣ ಶಸ್ತ್ರಚಿಕಿತ್ಸೆಯ ಜವಾಬ್ದಾರಿಯನ್ನೂ ಹೊಲಬೇಕು ಎಂದು ನಗರಸಭೆ ತಿಳಿಸಿದೆ.
