ಮಂಗಳೂರು: ಕರಾವಳಿಯ ಸಾಂಸ್ಕೃತಿಕ ವೈಭವವನ್ನು ಸಮುದ್ರದ ಅಲೆಗಳೊಂದಿಗೆ ಜೋಡಿಸುವ ವಿಶಿಷ್ಟ ಪ್ರಯತ್ನವಾಗಿ “ಯಕ್ಷಧ್ರುವ ಸಮುದ್ರಯಾನ”ಕ್ಕೆ ಭಾನುವಾರ ಅಧಿಕೃತ ಚಾಲನೆ ದೊರೆಯಿತು. ಮೇ 31ರಿಂದ ಜೂನ್ 6ರವರೆಗೆ ನಡೆಯಲಿರುವ ಲಕ್ಷದ್ವೀಪ ಪ್ರಯಾಣದ ಉದ್ಘಾಟನೆ ಬಲ್ಲಾಲ್ ಭಾಗ್ನ ಪತ್ತುಮುಡಿ ಸೌಧದಲ್ಲಿ ನೆರವೇರಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಹಾದಾನಿ ಬರೋಡ ಶಶಿಧರ ಶೆಟ್ಟಿ ಬ್ಯಾನರ್ ಅನಾವರಣಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭವಾನಿ ಶಿಪ್ಪಿಂಗ್ ಸರ್ವಿಸಸ್, ಮುಂಬಯಿಯ ಸಂಪೂರ್ಣ ಸಹಕಾರದೊಂದಿಗೆ ಹಾಗೂ ತ್ರಿರಂಗ ಸಂಗಮ ಮುಂಬಯಿ ಸಂಯೋಜನೆಯಲ್ಲಿ ಈ ಸಮುದ್ರಯಾನವನ್ನು ಆಯೋಜಿಸಲಾಗಿದೆ.

ಈ ಕುರಿತು ಮಾತನಾಡಿದ ಬರೋಡ ಶಶಿಧರ ಶೆಟ್ಟಿ, “ಫೌಂಡೇಶನ್ ಸದಸ್ಯರು, ಊರಿನ ಹಿತೈಷಿಗಳು, ಮುಂಬಯಿ ಹಾಗೂ ವಿದೇಶದ ಅಭಿಮಾನಿಗಳನ್ನು ಒಂದೇ ವೇದಿಕೆಯಲ್ಲಿ — ಹಡಗಿನಲ್ಲೇ — ಸೇರಿಸಿ ಯಕ್ಷಗಾನ, ತಾಳಮದ್ದಲೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದು ಈ ಯಾನ ವಿಶೇಷತೆ” ಎಂದರು.
ಮೇ 31ರಂದು ಮಂಗಳೂರಿನಿಂದ ಮುಂಬೈಗೆ ತೆರಳಿ, ಜೂನ್ 1ರಂದು ಹಡಗಿನಲ್ಲಿ ಲಕ್ಷದ್ವೀಪಕ್ಕೆ ಪ್ರಯಾಣಿಸಿ, ಜೂನ್ 6ರಂದು ಮಂಗಳೂರಿಗೆ ವಾಪಸ್ಸಾಗುವ ಯೋಜನೆ ರೂಪಿಸಲಾಗಿದೆ. ಆಸಕ್ತರಿಗಾಗಿ ಪ್ರಯಾಣದ ದರ ನಿಗದಿಪಡಿಸಲಾಗಿದ್ದು, ಮುಂದಿನ ವರ್ಷ ವಿಮಾನಯಾನ ಯೋಜನೆಯೂ ಕೈಗೆತ್ತಿಕೊಳ್ಳುವ ಉದ್ದೇಶವಿದೆ ಎಂದು ತಿಳಿಸಿದರು.
ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, “ಯಕ್ಷಧ್ರುವ ಸಮುದ್ರಯಾನವು ಬರೋಡ ಶಶಿಧರ ಶೆಟ್ಟಿಯವರ ಕಲ್ಪನೆ. ಈ ಪ್ರಯಾಣದಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ, ಎಂಆರ್ಜಿ ಗ್ರೂಪ್ನ ಎಂಡಿ ಡಾ. ಕೆ. ಪ್ರಕಾಶ್ ಶೆಟ್ಟಿ, ಭವಾನಿ ಶಿಪ್ಪಿಂಗ್ ಆಡಳಿತ ನಿರ್ದೇಶಕ ಕುಸುಮೋದರ ಡಿ. ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ” ಎಂದರು.
ಸಮುದ್ರಯಾನದ ವಿವರಗಳನ್ನು ತ್ರಿರಂಗ ಸಂಗಮದ ಸಂಚಾಲಕ ಕರ್ನೂರು ಮೋಹನ್ ರೈ ಹಾಗೂ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ನೀಡಿದರು. ಭಾಗವಹಿಸಲು ಆಸಕ್ತರು ಪ್ರದೀಪ್ ಆಳ್ವ ಕದ್ರಿ (9964279525) ಅಥವಾ ಕರ್ನೂರು ಮೋಹನ್ ರೈ (9867304757) ಅವರನ್ನು ಸಂಪರ್ಕಿಸಬಹುದಾಗಿದೆ.
ಮೇ 30ಕ್ಕೆ ‘ಪಟ್ಲ ಸಂಭ್ರಮ’
ಮೇ 30ರಂದು 11ನೇ ವರ್ಷದ “ಪಟ್ಲ ಸಂಭ್ರಮ” ಕಾರ್ಯಕ್ರಮ ನಡೆಯಲಿದ್ದು, ಅದರ ರೂಪುರೇಷೆಗಳನ್ನು ಸಿದ್ಧಪಡಿಸಿ ವಿವಿಧ ಘಟಕಗಳಿಗೆ ಜವಾಬ್ದಾರಿ ಹಂಚಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು. ಇದೇ ಸಂದರ್ಭದಲ್ಲಿ ಕಲಾವಿದರಿಗೆ “ಪಟ್ಲ ಯಕ್ಷಾಶ್ರಯ” ಯೋಜನೆಯಡಿ ₹15 ಲಕ್ಷ ನೆರವು ವಿತರಿಸಲಾಯಿತು. ಪೂರ್ವಭಾವಿ ಸಭೆಯಲ್ಲಿ ಪ್ರಾದೇಶಿಕ ಘಟಕಗಳ 350ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಸಭೆಯಲ್ಲಿ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಬಾಳ ಜಗನ್ನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ, ಉದಯಕುಮಾರ್ ಶೆಟ್ಟಿ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು. ಸರಪಾಡಿ ಅಶೋಕ ಶೆಟ್ಟಿ, ಪ್ರಭಾಕರ ಜೋಷಿ, ಭುಜಬಲಿ ಮತ್ತಿತರರು ಅನಿಸಿಕೆಗಳನ್ನು ಹಂಚಿಕೊಂಡರು.





