ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷದ ವಿದ್ಯಾರ್ಥಿ ಘಟಕವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ದಿನಾಂಕ 15-03-2026 ರಂದು ಸುಳ್ಯದಲ್ಲಿರುವ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಜಾಕೆ ಮಾಧವ ಗೌಡ ಅವರು ವಿದ್ಯಾರ್ಥಿ ಜನತಾದಳದ ಜಿಲ್ಲಾ ಪದಾಧಿಕಾರಿಗಳನ್ನು ಅಧಿಕೃತವಾಗಿ ನೇಮಕ ಮಾಡಿದರು.

ಈ ನೇಮಕಾತಿಯಲ್ಲಿ ಆಯುರ್ವೇದಿಕ್ ವಿದ್ಯಾರ್ಥಿ ನಿಹಾಲ್ ಎಸ್. ಕೋಡ್ತುಗುಳಿ ಅವರನ್ನು ಜಿಲ್ಲಾ ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಪ್ರಣವ್ ಬಾಲಕೃಷ್ಣ ಹಾಗೂ ಶ್ರೇಯಸ್ ಸಿ. ಕುಕ್ಕುಜೆ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಅದೇ ವೇಳೆ ರುತೇಶ್ ಜಾಕೆ ಮತ್ತು ಅಂಜನ್ ಮೂರ್ಜೆ ಅವರನ್ನು ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ.
ಇದರ ಜೊತೆಗೆ ಕಾರ್ಯಕಾರಿ ಸದಸ್ಯರಾಗಿ ಪ್ರೀತಮ್ ಮಾಜಿಕೋಡಿ, ಸಾಗರ್ ಹಾಗೂ ಸಾಯಿಸ್ಮರಣ್ ಅವರನ್ನು ಆಯ್ಕೆ ಮಾಡಲಾಗಿದೆ.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಜಾಕೆ ಮಾಧವ ಗೌಡ, ಪಕ್ಷದ ಸಂಘಟನೆ ಬಲವರ್ಧನೆ ಮತ್ತು ಮುಂದಿನ ರಾಜಕೀಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸುವ ಉದ್ದೇಶದಿಂದ ಈ ನೇಮಕಾತಿಗಳನ್ನು ಮಾಡಲಾಗಿದೆ ಎಂದು ತಿಳಿಸಿದರು. ಯುವಜನರು ಮತ್ತು ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆ ಪಕ್ಷದ ಭವಿಷ್ಯಕ್ಕೆ ಅತ್ಯಂತ ಮುಖ್ಯವಾಗಿದ್ದು, ವಿದ್ಯಾರ್ಥಿ ಘಟಕವು ಸಮಾಜದ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿ ಜನರ ಪರವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಜೆಡಿಎಸ್ ರಾಜ್ಯ ವಕ್ತಾರರಾದ ಎಂ.ಬಿ. ಸದಾಶಿವ ಅವರು ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು. ಜನತಾ ಪಕ್ಷದ ಉದಯ ರಾಷ್ಟ್ರ ಮತ್ತು ರಾಜ್ಯ ಕ್ಕೆ ನೀಡಿದ ಕೊಡುಗೆ ಗಳನ್ನು ಸವಿವರವಾಗಿ ತಿಳಿಸಿಕೊಟ್ಟರು ವಿದ್ಯಾರ್ಥಿ ಜನತಾದಳವು ಪಕ್ಷದ ಭವಿಷ್ಯದ ಶಕ್ತಿ ಎಂದು ಹೇಳಿದ ಅವರು, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಮಾಜಮುಖಿ ಚಿಂತನೆ ಬೆಳೆಸಿಕೊಂಡು ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿ ಘಟಕವು ಗ್ರಾಮ ಮಟ್ಟದಿಂದಲೇ ಸಂಘಟನೆಯನ್ನು ಬಲಪಡಿಸಿ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಶಿಕ್ಷಣ, ಉದ್ಯೋಗ ಹಾಗೂ ಯುವಜನರ ಭವಿಷ್ಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಸರ್ಕಾರದ ಗಮನ ಸೆಳೆಯುವಂತೆ ಹೋರಾಟ ನಡೆಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಸುಳ್ಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಅವರು ಸಹ ಮಾತನಾಡಿ, ಪಕ್ಷದ ಸಂಘಟನೆ ಬಲಪಡಿಸಲು ವಿದ್ಯಾರ್ಥಿ ಘಟಕದ ಪಾತ್ರ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು. ಸತ್ಯ , ರೋಹನ್ ಮತ್ತಿತರರು ಉಪಸ್ಥಿತರಿದ್ದರು
ವಿದ್ಯಾರ್ಥಿ ಜನತಾದಳದ ವತಿಯಿಂದ ಈಗಾಗಲೇ ಕಡಬ ತಾಲೂಕಿನ ಕಲೆಂಬಿ ಬಸ್ ವ್ಯವಸ್ಥೆ, ಹಳದಿ ಎಲೆ ಚುಕ್ಕೆ ರೋಗದಿಂದ ರೈತರಿಗೆ ಆಗುತ್ತಿರುವ ಸಮಸ್ಯೆ, ಹಾಗೂ ಸುಳ್ಯದಲ್ಲಿ ಉದ್ಯೋಗ ಸೃಷ್ಟಿಗಾಗಿ ಹೋರಾಟ ಸೇರಿದಂತೆ ಹಲವು ಜನಪರ ವಿಷಯಗಳಲ್ಲಿ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಲಾಯಿತು.
ಈ ನೇಮಕಾತಿಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಮುಂದುವರಿಸಲಾಗುವುದು ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಸಭೆಯಲ್ಲಿ ಜೆಡಿಎಸ್ ಪಕ್ಷದ ಹಲವು ಮುಖಂಡರು, ಕಾರ್ಯಕರ್ತರು ಹಾಗೂ ವಿದ್ಯಾರ್ಥಿ ಜನತಾದಳದ ಸದಸ್ಯರು ಉಪಸ್ಥಿತರಿದ್ದರು.




