ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದ ಹಾಗೂ ತಾಳಮದ್ದಳೆ ಅರ್ಥಧಾರಿ ವಿಟ್ಲ ಶಂಭು ಶರ್ಮ (74) ಶನಿವಾರ (ನವೆಂಬರ್ 1) ಬೆಳಗಿನ ಜಾವ ನಿಧನರಾದರು. ಅವರ ನಿಧನಕ್ಕೆ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ತೀವ್ರ ಸಂತಾಪ ಸೂಚಿಸಿದ್ದಾರೆ.
ಕುಂಬಳೆ ಸೀಮೆಯ ಎಡನಾಡು ಗ್ರಾಮದ ಶೆಡಂಪಾಡಿಯಲ್ಲಿ ಕೃಷ್ಣ ಭಟ್ಟ – ಹೇಮಾವತಿ ದಂಪತಿಗಳ ಪುತ್ರನಾಗಿ 1951 ಅಕ್ಟೋಬರ್ 13ರಂದು ಜನಿಸಿದ ಶಂಭು ಶರ್ಮ ಅವರು ತಾಳಮದ್ದಳೆ ಅರ್ಥ ಹೇಳುವ ಮೂಲಕ ಯಕ್ಷಗಾನ ಕ್ಷೇತ್ರಕ್ಕೆ ಕಾಲಿಟ್ಟರು. ನಂತರ ಇದೇ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ತೊಡಗಿಸಿಕೊಂಡು ಖ್ಯಾತ ಅರ್ಥಧಾರಿಯಾಗಿ ಹೆಸರು ಮಾಡಿದರು.
ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದ ಅವರು ಯಕ್ಷಗಾನದ ಲೋಕದಲ್ಲಿ ತರ್ಕಪೂರ್ಣ ಅರ್ಥಗಾರಿಕೆ, ವಿಶಿಷ್ಟ ಸ್ವರಶಕ್ತಿ, ಹಾಗೂ ಸಮಗ್ರ ಪಾಠಭಾವನೆಗಳಿಂದ ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದ್ದರು. ಸುಬ್ರಹ್ಮಣ್ಯ ಮೇಳ, ಕದ್ರಿ ಮೇಳ ಮೊದಲಾದ ಖ್ಯಾತ ಯಕ್ಷಗಾನ ಮಂಡಳಿಗಳಲ್ಲಿ ಅತಿಥಿ ಕಲಾವಿದರಾಗಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು.
ಅವರು ಪತ್ನಿ, ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ವಿಟ್ಲ ಶಂಭು ಶರ್ಮ ಅವರ ನಿಧನದಿಂದ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ ಕುಟುಂಬ ಸದಸ್ಯರಿಗೆ ದೊರಕಲೆಂದು ಯೋಗಿಶ್ ಶೆಟ್ಟಿ ಜಪ್ಪು ತಮ್ಮ ಸಂತಾಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







