ಕೊಡಗು, ಸೆಪ್ಟೆಂಬರ್ 20:
ವಿರಾಜಪೇಟೆ ಪಟ್ಟಣದ ಹೃದಯಭಾಗದಲ್ಲಿ ಬ್ಯೂಟಿ ಪಾರ್ಲರ್ ಪರವಾನಗಿ ಹೆಸರಿನಲ್ಲಿ ಅಕ್ರಮವಾಗಿ ಸ್ಪಾ ಮತ್ತು ಮಸಾಜ್ ಸೆಂಟರ್ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ, ತನಿಖೆಯನ್ನು ಗಂಭೀರವಾಗಿ ಮುಂದುವರೆಸಿದ್ದಾರೆ.
ಬ್ಯೂಟಿ ಪಾರ್ಲರ್ ಕವಚದಲ್ಲಿ ಅಕ್ರಮ ಚಟುವಟಿಕೆ:
ಕೇರಳ ಮೂಲದ ವ್ಯಕ್ತಿಯೊಬ್ಬರು ಖಾಸಗಿ ಕಟ್ಟಡವೊಂದನ್ನು ಬಾಡಿಗೆಗೆ ಪಡೆದು, ಬ್ಯೂಟಿ ಪಾರ್ಲರ್ ಆರಂಭಿಸಿದ್ದರು. ಆದರೆ, ಪರವಾನಗಿ ನಿಯಮ ಉಲ್ಲಂಘನೆ ಮಾಡಿಕೊಂಡು ಸ್ಪಾ ಹಾಗೂ ಮಸಾಜ್ ಕೇಂದ್ರದ ಹಣೆಪಟ್ಟಿಯ ಹಿಂದರಲ್ಲಿ ಅನುಮಾನಾಸ್ಪದ ಚಟುವಟಿಕೆಗಳನ್ನು (ವೇಶ್ಯಾವಾಟಿಕೆ) ನಡೆಸುತ್ತಿದ್ದಂತೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿದೆ.
ರೈಡಿನ ವೇಳೆ ಅಚ್ಚರಿ:
ಸ್ಥಳೀಯರ ಅನುಮಾನ ಮತ್ತು ದೂರಿನ ಆಧಾರದಲ್ಲಿ ಪೊಲೀಸರು ಕಟ್ಟಡದ ಮೇಲೆ ದಾಳಿ ನಡೆಸಿದಾಗ, ಇನ್ಸೈಡ್ ಪಾರ್ಲರ್ ಹೆಸರಿನಲ್ಲಿ ಅಕ್ರಮ ಮಸಾಜ್ ಸೆಂಟರ್ ಹಾಗೂ ವೇಶ್ಯಾವಾಟಿಕೆ ನಡೆಯುತ್ತಿರುವುದು ದೃಢಪಟ್ಟಿದೆ. ಈ ಸಂದರ್ಭದಲ್ಲಿ ಕೊಡಗು, ಮಂಗಳೂರು ಹಾಗೂ ತಮಿಳುನಾಡು ಮೂಲದ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.
ಬಂಧಿತರು:
ಪೊಲೀಸರ ವರದಿಯಂತೆ ಬಂಧಿತರಲ್ಲಿ ಕೇರಳದ ಕಣ್ಣೂರಿನ ಪ್ರದೀಪನ್ ಪಿ.ಪಿ (48), ಕಲೇಶ್ ಕುಮಾರ್ (45), ಶಾಜಿ (38) ಹಾಗೂ ವೀರಾಜಪೇಟೆಯ ಅಮ್ಮತ್ತಿ ನಿವಾಸಿ ಎ. ಪೊನ್ನಣ್ಣ (48) ಇದ್ದಾರೆ.

ಸಾರ್ವಜನಿಕ ಆಕ್ರೋಶ:
ಪಟ್ಟಣದ ಪೊಲೀಸ್ ವಸತಿ ಗೃಹ ಹಾಗೂ ತಾಲೂಕು ಕಚೇರಿ ಬಹಳ ಸಮೀಪದಲ್ಲಿ ನಡೆದ ಈ ಅಕ್ರಮ ಚಟುವಟಿಕೆಗಳು ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟಿಸಿದೆ. ಸ್ಥಳೀಯರ ಅಭಿಪ್ರಾಯದಲ್ಲಿ, ವೀರಾಜಪೇಟೆಯ ಕೆಲ ಬಡಾವಣೆಗಳಲ್ಲಿ ಇಂಥ “ಹೈಟೆಕ್ ವೇಶ್ಯಾವಾಟಿಕೆ” ನಡೆಯುತ್ತಿರುವ ಕುರಿತು ಹಲವು ಚರ್ಚೆಗಳು ನಡೆಯುತ್ತಿವೆ.
ಪೊಲೀಸರಿಂದ ಸಮಗ್ರ ತನಿಖೆ:
ಈ ಪ್ರಕರಣದ ಹಿಂದೆ ಇನ್ನೂ ದೊಡ್ಡ ಜಾಲವಿರಬಹುದೆಂಬ ಅನುಮಾನ ಹಿನ್ನೆಲೆ, ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರಬಹುದೆಂದು ಅಂದಾಜಿಸಲಾಗಿದೆ.





