ನಗರದ ಮಹಾಕಾಳಿ ಪಡ್ಪು ಅಂಡರ್ ಪಾಸ್ ರಸ್ತೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೇ ನೀರು ನಿಲ್ಲುವುದು, ಮೊಯ್ಲಿಕೆರೆಯ ನೀರು ಸಂಪೂರ್ಣ ಕಲುಷಿತಗೊಂಡಿರುವುದು ಸೇರಿದಂತೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ರವರು ಅಧಿಕಾರಿಗಳೊಂದಿಗೆ ಸ್ಥಳ ವೀಕ್ಷಣೆ ನಡೆಸಿದರು.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೊಯ್ಲಿಕೆರೆಯನ್ನು ಮೂಡಾ ವತಿಯಿಂದ ಸಂಪೂರ್ಣ ಅಭಿವೃದ್ಧಿಗೊಳಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಈ ಕೆರೆಗೆ ಬೇರೆ ಕಡೆಗಳ ಡ್ರೈನೇಜ್ ನಿಂದಾಗಿ ನೀರು ಕಲುಷಿತಗೊಂಡಿರುವ ಬಗ್ಗೆ ಅನೇಕ ಸಾರ್ವಜನಿಕರ ದೂರುಗಳು ಬಂದಿವೆ. ಮುಂದಿನ ದಿನಗಳಲ್ಲಿ ಈ ಕೆರೆಗೆ ಡ್ರೈನೇಜ್ ನೀರು ಬರದ ಹಾಗೆ ಅಗತ್ಯವಿರುವ ಎಲ್ಲಾ ಯೋಜನೆಗಳನ್ನು ಸಮಗ್ರವಾಗಿ ರೂಪಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಕಳೆದ ಹಲವಾರು ವರ್ಷಗಳಿಂದ ಈ ಭಾಗಕ್ಕೆ ವೆಟ್ ವೆಲ್ ನಿರ್ಮಾಣದ ಅವಶ್ಯಕತೆಯಿದ್ದು ಆ ಸಲುವಾಗಿ ಪಕ್ಕದಲ್ಲಿರುವ ಸುಮಾರು 10 ಸೆಂಟ್ಸ್ ಖಾಸಗಿ ಜಾಗವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿಯೂ ಮಾತುಕತೆ ನಡೆದಿದೆ ಎಂದರು.
ಅಲ್ಲದೇ ಇತ್ತೀಚೆಗೆ ಉದ್ಘಾಟನೆಗೊಂಡ ಮಹಾಕಾಳಿ ಪಡ್ಪು ಅಂಡರ್ ಪಾಸ್ ರಸ್ತೆಯ ಭಾಗದಲ್ಲಿ ಅಡ್ಡಲಾಗಿ ಗೋಡೆ ಕಟ್ಟಿರುವುದರಿಂದ ಮಳೆಯ ನೀರು ಸರಾಗವಾಗಿ ಹರಿಯಲು ಅಡಚಣೆ ಉಂಟಾಗಿದ್ದು ರಸ್ತೆಯಲ್ಲಿ ನೀರು ನಿಲ್ಲುವಂತಾಗಿದೆ. ಕೂಡಲೇ ಅಲ್ಲಿ ಸಮರ್ಪಕ ಚರಂಡಿಯನ್ನು ನಿರ್ಮಿಸಬೇಕು ಎಂದರು. ಇಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಮಾಜಿ ಉಪ ಮೇಯರ್ ಭಾನುಮತಿ ಪಿ.ಎಸ್ ಹಾಗೂ ನಿಕಟಪೂರ್ವ ಪಾಲಿಕೆ ಸದಸ್ಯರುಗಳಾದ ಶೈಲೇಶ್ ಶೆಟ್ಟಿಯವರು ನನ್ನ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಕಾರ್ಯಪ್ರವೃತ್ತರಾಗಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಳೆದ ಎರಡುವರೆ ವರ್ಷಗಳಲ್ಲಿ ಅಭಿವೃದ್ಧಿಗೆ ಯಾವುದೇ ಅನುದಾನಗಳು ನಡೆದಿರುವುದರಿಂದ ಅಭಿವೃದ್ಧಿ ಕಾರ್ಯ ಕುಂಠಿತವಾಗಿದ್ದರೂ, ಕ್ಷೇತ್ರದ ಸಮಸ್ಯೆ ಬಗ್ಗೆ ಶಕ್ತಿಮೀರಿ ಪ್ರಯತ್ನಿಸಲಾಗುವುದು ಎಂದು ಶಾಸಕರು ಇದೇ ವೇಳೆ ಹೇಳಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಅರುಣ್ ಪ್ರಭ, ರಾಜೇಶ್, ಸಬಿತ್, ನಮಿತ್, ಸುರೇಶ್, ಜಯ ಪ್ರಕಾಶ್, ಭವ್ಯ, ಚಿನ್ಮಯಿ, ಪ್ರಮುಖರಾದ ಶಿವಪ್ರಸಾದ್ ಬೋಳಾರ, ಗಿರೀಶ್ ಶೆಟ್ಟಿಬೆಟ್ಟು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



