ತುಳು ಸಂಗೀತ ಲೋಕದಲ್ಲಿ ಸತ್ವಯುತ ಸಾಹಿತ್ಯದ ಕೊರತೆಯನ್ನು ನೀಗಿಸಲು ಪಣತೊಟ್ಟ ಐಲೆಸಾ- ದಿ ವಾಯ್ಸ್ ಆಫ್ ಓಷನ್ (ರಿ) ಸಂಸ್ಥೆಗೆ ಇದೇ ಆಗಸ್ಟ್ ಹದಿನೈದಕ್ಕೆ ಐದು ವರ್ಷ ತುಂಬುತ್ತದೆ . ಕರೋನ ದುರಿತ ಕಾಲದಲ್ಲಿ ಹುಟ್ಟಿದ ಐಲೇಸಾ ಸಂಸ್ಥೆ ಸಂಗೀತ-ಸಾಹಿತ್ಯ- ಸಹಾಯ ಈ ಮೂರು ಮುಖ್ಯ ಧ್ಯೇಯಗಳನ್ನು ಇಟ್ಟುಕೊಂಡು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ತುಳು ಭಾವಗೀತೆಗಳಲ್ಲಿ ಅರ್ಥಪೂರ್ಣ ಸಾಹಿತ್ಯ ತುಂಬಿಕೊಂಡು, ಹೊಸಪ್ರತಿಭೆಗಳ ಧ್ವನಿಯಲ್ಲಿ ವಿ ಮನೋಹರ್ , ಪ್ರಮೋದ್ ಸಪ್ರೆ, ನಾಗಭೂಷಣ್ ಉಡುಪ, ಪ್ರೇಮಲತಾ ದಿವಾಕರ್ ಒಡಗೂಡಿದ ಖ್ಯಾತ ಸಂಗೀತ ನಿರ್ದೇಶಕರಲ್ಲಿ ಹಾಡುಗಳನ್ನು ಸಂಯೋಜಿಸಿ ಬಿಡುಗಡೆ ಮಾಡುತ್ತಿದೆ . ತುಳು ಸಂಗೀತ ಲೋಕಕ್ಕೆ ನೂರಾ ಒಂದು ಅತ್ಯುತ್ತಮ ಹಾಡುಗಳನ್ನು ಕೊಡಬೇಕು ಎನ್ನುವುದು ಐಲೇಸಾದ ಅಭಿಲಾಷೆ . ಈಗಾಗಲೇ ಹದಿನೆಂಟು ಹಾಡುಗಳನ್ನು ಬಿಡುಗಡೆ ಮಾಡಿ ಸುಮಾರು ಮೂವತ್ತೈದು ಹಾಡುಗಳನ್ನು ತನ್ನ ಜೋಳಿಗೆಯಲ್ಲಿಟ್ಟುಕೊಂಡು ತನ್ನ ಪ್ರಯತ್ನದ ಅರ್ಧ ದಾರಿಯನ್ನು ಸಂಸ್ಥೆ ಈಗಾಗಲೇ ಕ್ರಮಿಸಿದೆ

ನಾಡಿನ ಖ್ಯಾತ ಹಿನ್ನಲೆ ಗಾಯಕ ಡಾ. ರಮೇಶ್ಚಂದ್ರ ಅವರ ನೇತೃತ್ವದಲ್ಲಿ ಪ್ರೇಮಲತಾ ದಿವಾಕರ್ , ಸುಪ್ರಿಯಾ ರಘುನಂದನ್ , ನಾಗಚಂದ್ರಿಕಾ ಭಟ್ , ಅಜಯ್ ವಾರಿಯರ್ , ಸುರೇಖಾ ರಾವ್, ಪ್ರತಿಮಾ ಭಟ್ ಇಂತಹ ಪ್ರಬುದ್ಧ ಗಾಯಕರಿಂದ ಹಾಡಿಸಿ ಜೊತೆಯಲ್ಲಿ ಕರಾವಳಿಯ ಹೊಸ ಗಾಯಕರನ್ನು ಸೇರಿಸಿಕೊಂಡು ಹೊಸ ಪ್ರತಿಭೆಗಳ ಪರಿಚಯವನ್ನೂ ತುಳು ಸಂಗೀತಲೋಕಕ್ಕೆ ಮಾಡಿಸುವಲ್ಲಿ ಐಲೇಸಾ ಮುಂಚೂಣಿಯಲ್ಲಿದೆ.

ನೈಜೀರಿಯಾ , ಇಟಲಿ , ದಕ್ಷಿಣ ಆಫ್ರಿಕಾ , ಸ್ವಿಝರ್ಲ್ಯಾಂಡ್, ಓಮನ್ , ಬೆಹರೈನ್ ಹೀಗೆ ವಿಶ್ವದ ನಲವತ್ತೆರಡು ದೇಶಗಳಲ್ಲಿ ಅಲ್ಲಿಯ ತುಳು ಕನ್ನಡ ಭಾಷಿಗರ, ಸಂಸ್ಥೆಗಳ ಸಂಪರ್ಕದಲ್ಲಿದ್ದುಕೊಂಡು , ಇವರುಗಳನ್ನೆಲ್ಲಾ ಒಳಗೊಂಡಂತೆ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವ ಐಲೇಸಾಕ್ಕೆ ವಿಶ್ವದ ಖ್ಯಾತ ಸಂಘಟಕ ಅಬುದಾಭಿಯ ಸರ್ವೋತ್ತಮ ಶೆಟ್ಟಿ , ಕತಾರಿನ ಮೂಡಂಬೈಲು ಡಾ.ರವಿ ಶೆಟ್ಟಿ , ಸೌದಿಯ ನರೇಂದ್ರ ಶೆಟ್ಟಿ , ಕುವಾಯಿತಿನ ರಘು ಪೂಜಾರಿ, ರಮೇಶ್ ಕಿದಿಯೂರ್, ಆಸ್ಟ್ರೇಲಿಯಾದ ಸುರೇಶ ಪೂಂಜಾ ಅಮೆರಿಕಾದ AATA ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶ್ರೀವಲ್ಲಿ ರೈ ಮಾರ್ಟೆಲ್ , ಸ್ಥಾಪಕ ಅಧ್ಯಕ್ಷ ಭಾಸ್ಕರ್ ಶೇರಿಗಾರ್ , ಸಿಂಗಾಪುರ ತುಳುವೆರ್ ಸಂಸ್ಥೆಯ ರಾಜೇಶ್ ಆಚಾರ್ಯ ಬೆನ್ನೆಲುಬಾಗಿ ನಿಂತು ಸಹಕರಿಸುತ್ತಿದ್ದಾರೆ.

ಮುಂಬೈ, ನಿಟ್ಟೆ ವಿಶ್ವವಿದ್ಯಾಲಯ , ಮಂಗಳೂರು, ಮೈಸೂರು ವಿಶ್ವ ವಿದ್ಯಾಲಯ ಹೀಗೆ ಪ್ರಮುಖ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಜೊತೆ ಸೇರಿಕೊಂಡು ಐಲೇಸಾ ಸಾಹಿತ್ಯದ ಕೆಲವಾರು ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ.

ಸಾಮಾಜಿಕ ಕಳಕಳಿಯ ನೀರಿನ ಸದ್ಬಳಕೆ , ಮಳೆ ನೀರಿನ ಕೊಯ್ಲು , ಊರಿಗೊಂದು ಕೆರೆ , ತಂತ್ರಜ್ಞಾನಗಳ ಅರಿವಿನ ಕಾರ್ಯಕ್ರಮಗಳ ಮೂಲಕ ಕೂಡಾ ಐಲೇಸಾ ಜನಮೆಚ್ಚುಗೆ ಗಳಿಸಿದೆ. ವಯೋಸಮ್ಮಾನ್ ಎನ್ನುವ ವಿನೂತನ ಕಾರ್ಯಕ್ರಮದ ಮೂಲಕ ನಿಸ್ವಾರ್ಥ ಸಾಧನೆಗೈದು ನೆನಪಿನಿಂದಳಿದವರ ಕಾರ್ಯ ಸಾಧನೆಗಳನ್ನು ಮತ್ತೊಮ್ಮೆ ನೆನಪಿಸಿ ಅವರ ಜೀವನ ಸಂಧ್ಯಾಕಾಲದಲ್ಲಿ ಅವರ ಸಾಧನೆ ಮತ್ತು ವಯಸ್ಸಿಗನುಗುಣವಾದ ಆರ್ಥಿಕ ನೆರವನ್ನೂ ನೀಡಿ ಅವರ ಮೊಗದಲ್ಲಿ ಸಾರ್ಥಕ ನಗುವಿಗೆ ಸಂಸ್ಥೆ ಕಾರಣವಾಗಿದೆ .
ಸೇನೆಯಲ್ಲಿ ನಮಗೋಸ್ಕರ ದುಡಿದ , ಮಡಿದ ವೀರರ ತ್ಯಾಗವನ್ನು ಮನಸಾರೆ ಸ್ಮರಿಸಿ ,ಅವರ ಸಂಸಾರದ ಜೊತೆ ಸೇರಿಕೊಂಡು ಅವರ ತ್ಯಾಗದ ಮಹತ್ವವನ್ನು ನಾವು ಮರೆತಿಲ್ಲವೆಂದು ಮನಗಾಣಿಸಿ ಸಂಸಾರದ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಕೆಲಸವನ್ನು ಅರ್ಥಪೂರ್ಣವಾಗಿ ಮಾಡಿಕೊಂಡು ಬರುತ್ತಿದೆ .

ಈ ಸಾರಿ ಐದನೇ ವರ್ಷ ಪೂರೈಸುವ ಐಲೇಸಾ ಈಗ ಸುಧಾಕರ್ ಶೆಟ್ಟಿ ಮತ್ತು ಗೋಪಾಲ್ ಪಟ್ಟೆಯವರ ಕಾರ್ಯಾಧ್ಯಕ್ಷತೆಯಲ್ಲಿ ಮುಂಬೈಯ ಸುರೇಂದ್ರ ಮಾರ್ನಾಡು , ಬೆಂಗಳೂರಿನ ವಿವೇಕಾನಂದ ಮಂಡೆಕರ , ಅಜೇಶ್ ಚಾರ್ಮಾಡಿ, ಪ್ರಕಾಶ್ ಪಾವಂಜೆ , ಪಳ್ಳಿ ವಿಶ್ವನಾಥ್ ಶೆಟ್ಟಿ , ಅನಂತ್ ರಾವ್ , ಶಿವೂ ಸಾಲಿಯಾನ್ , ನರೇಂದ್ರ ಕಬ್ಬಿನಾಲೆ , ಶಾಂತಾರಾಮ್ ಶೆಟ್ಟಿ ಇವರನ್ನೊಳಗೊಂಡ ಕಾರ್ಯಕಾರಿ ಸಮಿತಿಯೊಂದಿಗೆ ಮುಂದಿನ ವರ್ಷದ ಕೊನೆಯೊಳಗೆ ವಿ. ಮನೋಹರ್ ಮಾರ್ಗದರ್ಶನದಲ್ಲಿ ತನ್ನ ನೂರಾ ಒಂದು ತುಳು ಹಾಡುಗಳ ಗುರಿಮುಟ್ಟುವ ಅಚಲ ವಿಶ್ವಾಸವನ್ನು ಹೊಂದಿದೆ .
