ಮಂಗಳೂರು: ತೀಯಾ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ರಚನೆ ಅಗತ್ಯವಾಗಿದೆ ಎಂದು ಭಾರತೀಯ ತೀಯಾ ಸಮಾಜ ಕೇಂದ್ರ ಸಮಿತಿ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯಕ್ಕೆ ಡಿಸೆಂಬರ್ 3ರಂದು ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀಯಾ ಸಮಾಜದ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಗುವುದಾದ್ದಾಗಿ ಅವರು ತಿಳಿಸಿದರು.

ಕುದ್ರೋಳಿ ಭಗವತಿ ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಕಳದ ಶಿವಗಿರಿ ಮಠ ಹಾಗೂ ಮಂಗಳೂರು ವಿವಿಯ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಂಯುಕ್ತ ಆಶ್ರಯದಲ್ಲಿ ಮಹಾತ್ಮಾ ಗಾಂಧೀಜಿ – ನಾರಾಯಣ ಗುರು ವರ್ಕಳ ಸಂವಾದದ ಶತಮಾನೋತ್ಸವ ಹಾಗೂ ಶ್ರೀ ನಾರಾಯಣ ಗುರು ಮಹಾನಿರ್ವಾಣ ಶತಮಾನೋತ್ಸವ ಕಾರ್ಯಕ್ರಮವನ್ನು ಡಿಸೆಂಬರ್ 3ರಂದು ಕೊಣಾಜೆಯ ಮಂಗಳೂರು ವಿವಿಯಲ್ಲಿ ಉದ್ಘಾಟಿಸಲಾಗುತ್ತಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮಹೋತ್ಸವಕ್ಕೆ ಚಾಲನೆ ನೀಡಲಿದ್ದು, ಇದೇ ವೇಳೆ ತೀಯಾ ಸಮುದಾಯದ ಬೇಡಿಕೆಯ ಮನವಿಯನ್ನು ಅವರ ಕೈಗೆ ಒಪ್ಪಿಸಲಾಗುವುದು. ಈ ಕುರಿತು ಕುದ್ರೋಳಿ, ಉಳ್ಳಾಲ, ಸಸಿಹಿಟ್ಟು ಮತ್ತು ಬೋಲಾಡ್ ಭಗವತಿ ಕ್ಷೇತ್ರಗಳಿಗೆ ಸೇರಿದ ತೀಯಾ ಸಮಾಜದ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಯತಿಪೂಜೆ, ಸರ್ವಮತ ಸಮ್ಮೇಳನ ಆಯೋಜನೆಗೊಂಡಿದ್ದು, ವಿಭಿನ್ನ ಮಠಗಳಿಂದ ಆಗಮಿಸುವ ಐವತ್ತು ಮಂದಿ ಸನ್ಯಾಸಿಗಳನ್ನು ಸತ್ಕರಿಸಲಾಗುತ್ತದೆ. ತೀಯಾ ಸಮಾಜದ ಎಲ್ಲಾ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅವರು ಕೋರಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ತೀಯಾ ಸಮಾಜದೊಂದಿಗೆ ಇರುವ ಗಾಢ ಬಾಂಧವ್ಯವನ್ನು ಸ್ಮರಿಸಿದ ಉಳ್ಳಾಲ್, “ಗುರುಗಳು 1908ರಲ್ಲಿ ನಮ್ಮ ರಾಜ್ಯಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಪವಿತ್ರ ಸ್ಥಳವೇ ಕುದ್ರೋಳಿ ಭಗವತಿ ಕ್ಷೇತ್ರ. ಈ ಇತಿಹಾಸವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದಲೇ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸುರೇಶ್ ಭಟ್ನಗರ, ವಿಶ್ವನಾಥ ಮಂಕಿಷ್ಟಾಂಡ್, ದೇವದಾಸ್ ಕೊಲ್ಯ, ಪ್ರೇಮಚಂದ್ರ, ಶಶಿಕಲಾ, ಆಶಾ ಚಂದ್ರಮೋಹನ್, ಸುಷ್ಕಾ ದೀಪಕ್, ಪುರುಷ ಸಾಲಿಯಾನ್, ರವೀಂದ್ರ ಕೊಡಿಯಾಲ್ಬೈಲ್, ಸುಧೀರ್ ಜೆಪ್ಪು, ಉಮೇಶ್ ಬಿಕರ್ನಕಟ್ಟೆ, ಪ್ರಭಾಕರ ಯೆಯ್ಯಾಡಿ, ರವಿ ಕೊಡಿಯಾಲ್ಬೈಲ್, ರಾಘವ ಉಚ್ಚಿಲ್, ರಾಜ್ ಗೋಪಾಲ್, ಉಮೇಶ್ ಬೆಂಜನಪದವು ಮತ್ತು ದಿನೇಶ್ ಕುಂಪಲ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.



