ಉಡುಪಿ, ಸೆಪ್ಟೆಂಬರ್ 16:
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಮಳಿಗೆ ತೆರೆಯಲು ಆಸಕ್ತ ನಾಗರಿಕರು ಹಾಗೂ ವ್ಯಾಪಾರಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸುಡುಮದ್ದು ಮಾರಾಟಕ್ಕೆ ತಾತ್ಕಾಲಿಕ ಪರವಾನಿಗೆ ಪಡೆಯಲು ಇಚ್ಛಿಸುವವರು ಅಕ್ಟೋಬರ್ 10ರ ಒಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಐಇ-5 ನಮೂನೆ ಬೇಕಾಗಿದ್ದು, ಅದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿದೆ. ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದಲ್ಲಿ ರಚಿಸಲಾದ ಸಮಿತಿಗೆ ಅರ್ಜಿ ಸಲ್ಲಿಸಿ ಅಗತ್ಯ ನಿರಾಕ್ಷೇಪಣಾ ಪತ್ರ ಪಡೆದು, ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ₹300 ಪರಿಶೀಲನಾ ಶುಲ್ಕ ಮತ್ತು ಪರವಾನಿಗೆ ಮಂಜೂರಾದ ಬಳಿಕ ₹600 ಪರವಾನಿಗೆ ಶುಲ್ಕ ಪಾವತಿಸಬೇಕಾಗುತ್ತದೆ.
ಅರ್ಜಿ ಜೊತೆಗೆ ಸಲ್ಲಿಸಬೇಕಾದ ದಾಖಲೆಗಳು:
ತಾತ್ಕಾಲಿಕ ಅಂಗಡಿ ತೆರೆಯುವ ಸ್ಥಳದ ನೀಲಿ ನಕ್ಷೆ
ಅರ್ಜಿದಾರರ ಭಾವಚಿತ್ರ
ಜಮೀನಿನ ಇತ್ತೀಚಿನ ಪಹಣಿ ಪತ್ರ
ಖಾಸಗಿ ಜಮೀನಾಗಿದ್ದರೆ ಮಾಲಕರ ಒಪ್ಪಿಗೆ ಪತ್ರ (₹100 ಸ್ಟಾಂಪ್ ಪೇಪರ್ನಲ್ಲಿ)
ಸರ್ಕಾರಿ ಜಮೀನಾದರೆ ಸಂಬಂಧಿಸಿದ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ
ಅಗ್ನಿಶಾಮಕ ಇಲಾಖೆ, ಪೊಲೀಸ್ ಇಲಾಖೆ, ತಹಶೀಲ್ದಾರ ಹಾಗೂ ಸ್ಥಳೀಯ ಸಂಸ್ಥೆಗಳ ನಿರಾಕ್ಷೇಪಣಾ ಪತ್ರಗಳು
ಮಳಿಗೆ ತೆರೆಯುವ ಸ್ಥಳವು ಸಾರ್ವಜನಿಕ ವಸತಿ ಹಾಗೂ ಅಂಗಡಿಗಳಿಂದ ದೂರವಿರುವ ಬಯಲು ಸ್ಥಳವಾಗಿರಬೇಕು. ಸ್ಪೋಟಕ ನಿಯಮಾವಳಿ 2008ರ ಅನುಸಾರ, ನಿಯಮಬದ್ಧತೆ ಪಾಲನೆಯೊಂದಿಗೆ ಪರವಾನಿಗೆ ಮಂಜೂರು ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
