ಬೆಂಗಳೂರು: ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯು ತನ್ನ ಆರಂಭದ ದಿನಗಳಲ್ಲಿ ಕೇವಲ ಮೂವರು ಸಿಬ್ಬಂದಿಗಳಿಂದ ಆರಂಭಗೊಂಡು, ಇಂದಿನ ದಿನದಲ್ಲಿ 22 ಮಂದಿ ಸಿಬ್ಬಂದಿಗಳನ್ನು ಹೊಂದಿದ ಸಂಸ್ಥೆಯಾಗಿ ಬೆಳೆಯಲು ಶ್ರಮಿಸಿದೆ. ಈ ಬೆಳವಣಿಗೆಯ ಹಿಂದೆ ಸಿಬ್ಬಂದಿಗಳ ತ್ಯಾಗ ಮತ್ತು ದುಡಿಮೆ ಪ್ರಮುಖವಾಗಿದೆ ಎಂದು ಸೊಸೈಟಿ ಅಧ್ಯಕ್ಷ ಎಚ್. ವಸಂತ ಬರ್ನಾಡ್ ಹೇಳಿದರು.

ಸಮಾರಂಭದಲ್ಲಿ ಅವರು, “ಸಂಸ್ಥೆಯ ಮುಂದಿನ ಬೆಳವಣಿಗೆಯು ಸಿಬ್ಬಂದಿಗಳ ಶ್ರಮಕ್ಕೆ ಆಧಾರಿತವಾಗಿದ್ದು, ಅವರ ಆರೋಗ್ಯವನ್ನು ಕಾಪಾಡುವುದು ಆಡಳಿತ ಮಂಡಳಿಯ ಪ್ರಮುಖ ಜವಾಬ್ದಾರಿಯಾಗಿದೆ” ಎಂದು ಸ್ಪಷ್ಟಪಡಿಸಿದರು. ಈ ಹಿನ್ನೆಲೆಯಲ್ಲಿಯೇ ಸೊಸೈಟಿಯ ಎಲ್ಲ ಸಿಬ್ಬಂದಿಗಳಿಗೆ ತಲಾ ₹3 ಲಕ್ಷದ ಮೌಲ್ಯದ ಆರೋಗ್ಯ ವಿಮಾ ಪಾಲಿಸಿಗಳನ್ನು ವಿತರಿಸಲಾಯಿತು.
ಈ ವಿಶೇಷ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಗೌತಮ್ ಜೈನ್ ಮತ್ತು ಗಣೇಶ್ ಪ್ರಸಾದ್ ದೇವಾಡಿಗ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಅವರು ಸಮಾರಂಭವನ್ನು ಸ್ವಾಗತಿಸಿ ಮಾತನಾಡಿದರು. ಲೆಕ್ಕಿಗರಾದ ಲೋಲಾಕ್ಷಿ ವಂದನೆಯನ್ನು ಸಲ್ಲಿಸಿದರು.
ಪ್ರಧಾನ ಕಚೇರಿಯ ಸಾಲ ವಿಭಾಗದ ಪ್ರಬಂಧಕಿ ಅಕ್ಷತಾ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.