ಮಂಗಳೂರು: ಸಹಕಾರ ಕ್ಷೇತ್ರದ ಭೀಷ್ಮ, ‘ಸಹಕಾರ ರತ್ನ’ ಎಂದು ಕೀರ್ತಿಸಲ್ಪಡುವ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ 77ನೇ ಜನ್ಮದಿನದ ಅಂಗವಾಗಿ ಅಭಿವಂದನಾ ಸಮಾರಂಭ ಹಾಗೂ 77 ಮಂದಿ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮವು ಪ್ರಧಾನ ಕಚೇರಿಯ ಬ್ಯಾಂಕ್ ಸಭಾಂಗಣದಲ್ಲಿ ಭವ್ಯವಾಗಿ ನೆರವೇರಿತು.
ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಸಹಕಾರಿ ಕ್ಷೇತ್ರದಲ್ಲಿ ಡಾ. ರಾಜೇಂದ್ರ ಕುಮಾರ್ ಸಾಧಿಸಿರುವುದು ಅಭೂತಪೂರ್ವ. ತಮ್ಮ ಹುಟ್ಟುಹಬ್ಬವನ್ನೇ ಸಮಾಜಮುಖಿ ಕಾರ್ಯಕ್ರಮದ ರೂಪದಲ್ಲಿ ಆಚರಿಸುವುದು ಅವರ ಜನಪರ ಮನೋಭಾವಕ್ಕೆ ಸಾಕ್ಷಿ. ಅವರು ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯ ಅವರಿಗೆ ಸರಿಸಮನಾಗಿ ಬೆಳೆಯಲಿ,” ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅಭಿವಂದನಾ ಭಾಷಣದಲ್ಲಿ, “ಡಾ. ರಾಜೇಂದ್ರ ಕುಮಾರ್ ಭಾರತ ಕಂಡ ಸಮರ್ಥ ಸಹಕಾರಿ ನಾಯಕರು. ಕೃಷಿ ಆಧಾರಿತ ಸಮಾಜದಲ್ಲಿ ರೈತರ ಆರ್ಥಿಕ ನ್ಯಾಯಕ್ಕಾಗಿ ಅವರು ನಿರಂತರ ಶ್ರಮಿಸಿದ್ದಾರೆ. ಬ್ಯಾಂಕ್ ಇಂದು ಹಿಮಾಲಯದ ಎತ್ತರಕ್ಕೆ ಬೆಳೆಯಲು ಅವರ ಪ್ರಾಮಾಣಿಕ ನಾಯಕತ್ವವೇ ಕಾರಣ,” ಎಂದು ಪ್ರಶಂಸಿಸಿದರು.

ಅಭಿವಂದನೆ ಸ್ವೀಕರಿಸಿ ಮಾತನಾಡಿದ ಡಾ. ರಾಜೇಂದ್ರ ಕುಮಾರ್, “33 ವರ್ಷಗಳ ಹಿಂದೆ ಸಹಕಾರಿ ಕ್ಷೇತ್ರಕ್ಕೆ ಕಾಲಿಟ್ಟಾಗ ಪರಿಸ್ಥಿತಿ ಭಿನ್ನವಾಗಿತ್ತು. ಆದರೆ ಎಲ್ಲರ ಸಹಕಾರದಿಂದ ಇಂದು ನಮ್ಮ ಜಿಲ್ಲೆಯ ಸಹಕಾರಿ ಕ್ಷೇತ್ರ ಶ್ರೀಮಂತವಾಗಿದೆ. ಬಹುತೇಕ ಸಂಘಗಳಲ್ಲಿ ಅವಿರೋಧ ಆಯ್ಕೆ ನಡೆಯುತ್ತಿದೆ. ನವೋದಯ ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರಿಗೆ ಅಲ್ಪ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ರೈತರಿಗೆ ಅತ್ಯಧಿಕ ಕೃಷಿ ಸಾಲ ವಿತರಿಸಿದ ಜಿಲ್ಲೆಯೆಂಬ ಹೆಗ್ಗಳಿಕೆ ನಮ್ಮದು,” ಎಂದರು. ಮುಂದುವರಿದು, “ಇದು ನನ್ನೊಬ್ಬನ ಸಾಧನೆ ಅಲ್ಲ; ಎಲ್ಲ ಸಹಕಾರಿಗಳ ಒಗ್ಗಟ್ಟಿನ ಫಲ,” ಎಂದು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ 77 ಮಂದಿ ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ವಹಿಸಿದ್ದರು. ಅಭಿವಂದನಾ ಸಮಿತಿಯ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಅತಿಥಿಗಳನ್ನು ಸ್ವಾಗತಿಸಿದರು. ದೀಕ್ಷಿತಾ ಭಟ್ ಪ್ರಾರ್ಥನೆ ನೆರವೇರಿಸಿದರು. ನಿತೇಶ್ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ನಬಾರ್ಡ್ ಡಿಜಿಎಂ ಕೆ. ಜಗದೀಶ್, ಸಹಕಾರ ಮಾರಾಟ ಮಂಡಳಿಯ ಎಂ.ಡಿ. ಲಿಂಗರಾಜು, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಯಕರ ಶೆಟ್ಟಿ ಇಂದ್ರಾಳಿ, ಕಣಚೂರು ಮೋನು, ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಮೇಘರಾಜ್ ಜೈನ್, ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಎಂ. ವಾದಿರಾಜ ಶೆಟ್ಟಿ, ಭಾಸ್ಕರ್ ಎಸ್. ಕೋಟ್ಯಾನ್, ಶಶಿಕುಮಾರ್ ರೈ ಬಾಲ್ಗೊಟ್ಟು, ಎಸ್.ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ. ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.




