ಮುಂಬೈ:
ಬಾಲಿವುಡ್ನ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ಅವರ ನಿವಾಸದ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಅಪರಾಧ ವಿಭಾಗದ ಪೊಲೀಸರು ಐವರು ಯುವಕರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಮುಂಬೈನ ಜುಹು ಪ್ರದೇಶದಲ್ಲಿರುವ ರೋಹಿತ್ ಶೆಟ್ಟಿ ಅವರ ‘ಶೆಟ್ಟಿ ಟವರ್’ ನಿವಾಸದ ಮೇಲೆ ಶನಿವಾರ ತಡರಾತ್ರಿ ಅಪರಿಚಿತರು ಗುಂಡು ಹಾರಿಸಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ದಾಳಿಯ ಬಳಿಕ ಶಂಕಿತರು ಪುಣೆಗೆ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು.
ಈ ಸುಳಿವಿನ ಆಧಾರದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪುಣೆಯ ವಾರ್ಜೆ ಪೊಲೀಸ್ ಠಾಣೆ ಸಿಬ್ಬಂದಿ ಭಾನುವಾರ ಮಧ್ಯಾಹ್ನ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಮನ್ ಆನಂದ್ ಮರೋಟೆ (27), ಆದಿತ್ಯ ಜ್ಞಾನೇಶ್ವರ ಗಾಯಕೆ (19), ಸಿದ್ಧಾರ್ಥ್ ದೀಪಕ್ ಯೆನ್ಪುರೆ (20), ಸಮರ್ಥ ಶಿವಶಂಕರ್ ಪೊಮಾಜಿ (18) ಮತ್ತು ಸ್ವಪ್ನಿಲ್ ಬಂಡು ಸಕತ್ (23) ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರೂ ಪುಣೆಯ ನಿವಾಸಿಗಳಾಗಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಗಳಿಗೆ ಯಾವುದೇ ಹಿಂದಿನ ಕ್ರಿಮಿನಲ್ ಹಿನ್ನೆಲೆ ಇಲ್ಲ. ಅವರು ದಿನಗೂಲಿ ಕೆಲಸ, ಸಣ್ಣ ವ್ಯಾಪಾರ ಹಾಗೂ ಚಾಲನಾ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವುದು ತಿಳಿದುಬಂದಿದೆ.
ಈ ದಾಳಿಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸಂಪರ್ಕ ಇರಬಹುದೆಂಬ ಪ್ರಾಥಮಿಕ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಬಂಧಿತರನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಸಂಭಾಜಿ ಕದಮ್ ಮಾಹಿತಿ ನೀಡಿದ್ದಾರೆ.
ಗುಂಡಿನ ದಾಳಿಯ ಹಿಂದಿನ ಉದ್ದೇಶ, ಇದಕ್ಕೆ ಯಾವುದೇ ದೊಡ್ಡ ಅಪರಾಧ ಗ್ಯಾಂಗ್ ಪಿತೂರಿ ಸಂಬಂಧ ಹೊಂದಿದೆಯೇ ಎಂಬುದರ ಕುರಿತು ಮುಂಬೈ ಅಪರಾಧ ವಿಭಾಗವು ತೀವ್ರ ತನಿಖೆ ಮುಂದುವರಿಸಿದೆ.


