ಕಾರವಾರ: ಕಾರವಾರ ತಾಲೂಕಿನ ಕದ್ರಾ ನಿವಾಸಿ ಯುವತಿ ರಿಶೆಲ್ ಡಿಸೋಜಾ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಗಂಭೀರ ನಿರ್ಲಕ್ಷ್ಯ ವಹಿಸಿದ ಆರೋಪದ ಹಿನ್ನೆಲೆಯಲ್ಲಿ ಕದ್ರಾ ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್ ಬಂಡಿವಡ್ಡರ್ ಅವರನ್ನು ಅಮಾನತುಗೊಳಿಸಲಾಗಿದೆ.
ಪ್ರಕರಣವು ರಾಜಕೀಯ ಹಾಗೂ ಸಾಮಾಜಿಕವಾಗಿ ತೀವ್ರ ತಿರುವು ಪಡೆದುಕೊಂಡ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಕದ್ರಾ ನಿವಾಸಿಗಳಾದ ರೀನಾ ಮತ್ತು ಕ್ರೀಸ್ತೋದ್ ಡಿಸೋಜ ದಂಪತಿಯ ಪುತ್ರಿ ರಿಶೆಲ್ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವಿಗೆ ಜೆಡಿಎಸ್ ಮುಖಂಡೆ ಚೈತ್ರಾ ಕೊಠಾರ್ ಅವರ ಪುತ್ರ ಚಿರಾಗ್ ನೀಡುತ್ತಿದ್ದ ನಿರಂತರ ಕಿರುಕುಳವೇ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಯುವತಿಯನ್ನು ಪ್ರೀತಿಸುವಂತೆ ಒತ್ತಡ ಹೇರುತ್ತಿದ್ದಲ್ಲದೆ, ಸಾವಿಗೂ ಮುನ್ನ ಅತ್ಯಾಚಾರ ಎಸಗಿರುವ ಸಂಶಯವಿದೆ ಎಂದೂ ಅವರು ದೂರಿದ್ದಾರೆ.
ಮೃತ ಯುವತಿಯ ಮೊಬೈಲ್ನಲ್ಲಿ ಸುಮಾರು 230 ಪುಟಗಳಷ್ಟು ವಾಟ್ಸಪ್ ಚಾಟ್ಗಳು ಲಭ್ಯವಿದ್ದರೂ, ಅವುಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಅಲ್ಲದೆ, ಪ್ರಾಥಮಿಕ ಹಂತದಲ್ಲೇ ಪ್ರಮುಖ ಆರೋಪಿಯನ್ನು ಪತ್ತೆಹಚ್ಚುವಲ್ಲಿ ವಿಫಲತೆ, ಹಾಗೂ ಮೊದಲ ಮರಣೋತ್ತರ ಪರೀಕ್ಷೆ ಸಮರ್ಪಕವಾಗಿರಲಿಲ್ಲ ಎಂಬ ಆರೋಪಗಳು ಪಿಎಸ್ಐ ವಿರುದ್ಧ ತೀವ್ರಗೊಂಡಿವೆ.
ಅತ್ಯಾಚಾರದ ಸಂಶಯ ಹಿನ್ನೆಲೆಯಲ್ಲಿ ತಜ್ಞ ವೈದ್ಯರಿಂದ ಮರು ಮರಣೋತ್ತರ ಪರೀಕ್ಷೆ ನಡೆಸುವಂತೆ ಪೋಷಕರು ಒತ್ತಾಯಿಸಿದ್ದು, ಈ ಕುರಿತು ಪೊಲೀಸ್ ಇಲಾಖೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ ಮಹಿಳಾ ಆಯೋಗಕ್ಕೂ ದೂರು ಸಲ್ಲಿಕೆಯಾಗಿದ್ದು, ಕ್ರೈಸ್ತ ಸಮುದಾಯದ ಮುಖಂಡರು ಹಾಗೂ ರಾಜಕೀಯ ವಲಯದಿಂದ ಒತ್ತಡ ಹೆಚ್ಚಾಗಿದೆ.
ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದರೂ, ಸಮರ್ಪಕ ಹಾಗೂ ಕಾನೂನಾತ್ಮಕ ಸಾಕ್ಷ್ಯಗಳ ಕೊರತೆಯಿಂದ ತಕ್ಷಣ ಬಂಧನ ಸಾಧ್ಯವಾಗಿರಲಿಲ್ಲ ಎಂದು ಪೊಲೀಸ್ ವಲಯದ ಮೂಲಗಳು ತಿಳಿಸಿವೆ. ಆದರೆ ಪ್ರಾಥಮಿಕ ತನಿಖೆಯಲ್ಲೇ ಉಂಟಾದ ವಿಳಂಬ ಮತ್ತು ಕ್ಷೇತ್ರ ತನಿಖೆಯಲ್ಲಿ ಕಂಡುಬಂದ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಪಿಎಸ್ಐ ಅವರನ್ನು ಅಮಾನತ್ತಿನಲ್ಲಿ ಇಡಲಾಗಿದೆ.
ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚುವ ನಿಟ್ಟಿನಲ್ಲಿ ಪ್ರತ್ಯೇಕ ತನಿಖಾ ತಂಡವನ್ನು ರಚಿಸಲಾಗಿದ್ದು, ಆರೋಪಿಗಳ ಬಂಧನ ಸೇರಿದಂತೆ ಪ್ರಕರಣದ ಎಲ್ಲ ಆಯಾಮಗಳ ಬಗ್ಗೆ ಆಳವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ, ದಿನಾಂಕ 19/01/2026 ರಂದು ಕಾರವಾರದಲ್ಲಿ ಕ್ರೈಸ್ತ ಮುಖಂಡರು ಹಾಗೂ ಕರ್ನಾಟಕ ಕ್ರೈಸ್ತ ಸಂಘಟನೆಗಳ ಅಧ್ಯಕ್ಷರಾದ ಶ್ರೀಮಾನ್ ಸ್ಟ್ಯಾನಿ ಪಿಂಟೋ ಅವರ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ಆಯೋಜಿಸಲಾಗಿದೆ. ಸಮಗ್ರ ತನಿಖೆ ನಡೆಸಿ ಮೃತ ಕುಟುಂಬಕ್ಕೆ ನ್ಯಾಯ ಒದಗಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಆಲ್ ಇಂಡಿಯಾ ಕಥೋಲಿಕ್ ಯೂನಿಯನ್ (AICU) ರಾಷ್ಟ್ರೀಯ ಅಧ್ಯಕ್ಷ ಶ್ರೀಮಾನ್ ಅಲ್ವಿನ್ ಡಿಸೋಜಾ ಅವರು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.





