ಉಡುಪಿ ಬ್ರಹ್ಮಾವರ : ಸೆಪ್ಟೆಂಬರ್ 12 – ಮದುವೆಗೆ ನಿರಾಕರಿಸಿದ ಯುವತಿಗೆ ತನ್ನ ಪ್ರೇಮವನ್ನು ಒತ್ತಾಯಿಸುತ್ತಿದ್ದ ಯುವಕನೊಬ್ಬ ಚಾಕುವಿನಿಂದ ದಾಳಿ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಹಲ್ಲೆಗೆ ಒಳಗಾದ ರಕ್ಷಿತಾ (24) ಎಂಬ ಯುವತಿ ಗಂಭೀರವಾಗಿ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ದಿನನಿತ್ಯದಂತೆ ಬಸ್ ನಿಲ್ದಾಣದತ್ತ ಹೋಗುತ್ತಿದ್ದ ರಕ್ಷಿತಾ ಅವರ ಹಿಂಬಾಲಿಸಿ ಬಂದ ಆರೋಪಿ ಯುವಕ, ಸ್ಥಳದಲ್ಲೇ ಚಾಕು ಬಳಸಿ ಕುತ್ತಿಗೆಗೆ ಇರಿದಿದ್ದಾನೆ. ತಕ್ಷಣವೇ ರಕ್ತಸ್ರಾವದಿಂದ ಬಿದ್ದುಹೋದ ರಕ್ಷಿತಾ ಅವರನ್ನು ಸ್ಥಳೀಯರು ತಕ್ಷಣವೇ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವಕ ಯುವತಿಯನ್ನು ಮದುವೆಯಾಗಬೇಕೆಂದು ಬಹಳ ಸಮಯದಿಂದ ಒತ್ತಾಯಿಸುತ್ತಿದ್ದ ಯುವತಿ ಹಾಗೂ ಕುಟುಂಬ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಇಬ್ಬರ ಮಧ್ಯೆ ನಿರಂತರ ಜಗಳ ನಡೆಯುತ್ತಿತ್ತು ಎಂದು ವರದಿಯಾಗಿದೆ.
ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಶೋಧ ಕಾರ್ಯ ಮುಂದುವರೆದಿದೆ. ಹೆಚ್ಚಿನ ಮಾಹಿತಿ ಶೀಘ್ರದಲ್ಲಿ ನೀಡಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.
