ಶಿಕ್ಷಣ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಗುರುಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದ ಜನಾನುರಾಗಿ ಶಿಕ್ಷಕ, ಸಜ್ಜನ – ಸ್ನೇಹಶೀಲ ವ್ಯಕ್ತಿತ್ವದ ವಿಶ್ವನಾಥ ಜೋಗಿ ಕದ್ರಿ (72) ಅವರು ಜುಲೈ 8ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಮೂರು ದಶಕಗಳಿಂದ ಮಂಗಳೂರು ತಾಲೂಕಿನ ಬಲ್ಮಠ,ಕಾವೂರು,ಮೊಂಟೆಪದವು ಗುರುಪುರ ಮೊದಲಾದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ದುಡಿದ ಅವರು 2014ರಲ್ಲಿ ಪ್ರಾಚಾರ್ಯರಾಗಿ ನಿವೃತ್ತರಾದರು. ತಮ್ಮ ಸೇವಾವಧಿಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ವಿದ್ಯಾರ್ಥಿಗಳ ಹಾಗೂ ಹೆತ್ತವರ ನೆಚ್ಚಿನ ಅಧ್ಯಾಪಕರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ನಿವೃತ್ತರಾದ ಬಳಿಕ ನಗರದ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು.
ಕಳೆದ ಆರು ತಿಂಗಳಿಂದ ಅಸ್ವಸ್ಥರಾಗಿದ್ದ ಅವರು ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದರೂ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿ ಕೊನೆಯುಸಿರೆಳೆದರು. ಶಿಕ್ಷಕಿಯಾಗಿದ್ದ ಪತ್ನಿ ಶುಭಾ ವಿಶ್ವನಾಥ್ ಹಾಗೂ ವಿದೇಶದಲ್ಲಿ ಉದ್ಯೋಗದಲ್ಲಿರುವ ಏಕೈಕ ಪುತ್ರಿ – ಅಳಿಯ ಮತ್ತು ಅಪಾರ ಬಂಧು ವರ್ಗವನ್ನವರು ಅಗಲಿದ್ದಾರೆ.
ಶ್ರದ್ಧಾಂಜಲಿ :
ಪ್ರೊ.ವಿಶ್ವನಾಥ್ ಕೆ. ಅವರ ನಿಧನಕ್ಕೆ ಗುರುಪುರದಲ್ಲಿ ಅವರ ಸಹೋದ್ಯೋಗಿಯಾಗಿದ್ದ ಲೇಖಕ – ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿ ವಿಶ್ವನಾಥ್ ಅವರ ದಕ್ಷತೆ,ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವವನ್ನು ಸ್ಮರಿಸಿ ಸಂತಾಪ ಸೂಚಿಸಿದ್ದಾರೆ.
ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಶೆಣೈ, ಕಾಟಿಪಳ್ಳ ಪ.ಪೂ. ಕಾಲೇಜು ಪ್ರಾಚಾರ್ಯೆ ಅನುಸೂಯ ಕೆ.ಪಿ., ಬೊಕ್ಕಪಟ್ಣದ ನಿವೃತ್ತ ಪ್ರಾಂಶುಪಾಲ ಶ್ಯಾಮ ಮೊಯಿಲಿ, ಸಿದ್ಧಕಟ್ಟೆಯ ಎಂ.ಪದ್ಮನಾಭ ರೈ , ಉಪನ್ಯಾಸಕರುಗಳಾದ ಗುರುಪುರದ ಕೇಶವ ಪೂಜಾರಿ, ಗಿರೀಶ್ ಕುಲಾಲ್, ಕಾವೂರಿನ ಸುಧೀರ್ ಕುಮಾರ್ ಉಚ್ಚಿಲ್, ಕದ್ರಿ ಶ್ರೀ ಮಂಜುನಾಥ ದೇವಾಲಯದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಸದಸ್ಯ ಎಚ್.ಕೆ.ಪುರುಷೋತ್ತಮ್ ಹಾಗೂ ಜೋಗಿ ಸಮಾಜದ ಪ್ರಮುಖರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ದಿವಂಗತರ ವೈಕುಂಠ ಸಮಾರಾಧನೆಯು ಜುಲೈ21ರಂದು ಸೋಮವಾರ ಮದ್ಯಾಹ್ನ ಗಂಟೆ 12ಕ್ಕೆ ಕದ್ರಿಗುಡ್ಡೆಯ ಶ್ರೀ ಗೋಕರ್ಣನಾಥ ಸಭಾ ಭವನದ ಮಿನಿ ಹಾಲ್ ನಲ್ಲಿ ಜರಗಲಿದೆ ಎಂದು ಅವರ ಕುಟುಂಬ ಸದಸ್ಯರಾದ ದಿನೇಶ್ ಜೋಗಿ ತಿಳಿಸಿದ್ದಾರೆ.