ಮಂಗಳೂರು : ಮಂಗಳೂರು ಮಲ್ಲಿಕಟ್ಟೆ ಪ್ರದೇಶದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ನಕಲಿ ದಾಖಲೆಗಳನ್ನು ಬಳಸಿಕೊಂಡು ಕೋಟ್ಯಂತರ ರೂ. ಸಾಲವನ್ನು ವಂಚಿಸಿ ಪಡೆದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Electro World Enterprises ಹಾಗೂ M H Enterprises ಎಂಬ ಎರಡು ಸಂಸ್ಥೆಗಳು MSME ಯೋಜನೆಯ ಅಡಿಯಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಕ್ರಮವಾಗಿ ₹1.20 ಕೋಟಿ ಮತ್ತು ₹1.30 ಕೋಟಿಗಳ ಸಾಲವನ್ನು ಮಂಜೂರು ಮಾಡಿಕೊಂಡಿದ್ದು, ಈ ಮೊತ್ತವನ್ನು ನಿಗದಿತ ವ್ಯಾಪಾರದ ಬದಲು ವೈಯಕ್ತಿಕವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿ ಬಳಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಎಸ್.ಬಿ.ಐ ಚೀಫ್ ಮ್ಯಾನೇಜರ್ ಸೆಪ್ಟೆಂಬರ್ 16 ರಂದು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಅದರಂತೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 316(2), 316(5), 318(2), 318(3) ಮತ್ತು 3(5) ಅಡಿಯಲ್ಲಿ ಅ.ಕ್ರ 130/2025 ಮತ್ತು 131/2025 ಎಂಬ ಎರಡು ಪ್ರತ್ಯೇಕ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.
ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಮುಂದಿನ ತನಿಖೆ ಚುರುಕಿನಿಂದ ನಡೆಯುತ್ತಿದೆ. ಈ ಪ್ರಕರಣ ಮಂಗಳೂರು ನಗರದಲ್ಲಿ ಬ್ಯಾಂಕ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಗಂಭೀರ ಅಲರ್ಟಾಗಿ ಪರಿಗಣಿಸಲಾಗಿದೆ.