ಸುರತ್ಕಲ್ನ ಎಂ.ಆರ್.ಪಿ.ಎಲ್. (MRPL) ಘಟಕದಲ್ಲಿ ಮಂಗಳವಾರ ಬೆಳಗ್ಗೆ ಸುಮಾರು 11 ಗಂಟೆಗೆ ಬೆಂಕಿ ಅವಘಡ ಸಂಭವಿಸಿರುವ ಘಟನೆ ವರದಿಯಾಗಿದೆ. ಜೋಕಟ್ಟೆ–ಬಜ್ಪೆ ನಡುವಿನ ಫೇಸ್–3 ಘಟಕದಲ್ಲಿರುವ ಪೆಟ್ರೋಲಿಯಂ ತ್ಯಾಜ್ಯ ಸಂಸ್ಕರಣಾ ಘಟಕದ ಬಳಿ ಈ ದುರ್ಘಟನೆ ನಡೆದಿದೆ.
ಮಾಹಿತಿಯಂತೆ, ಘಟಕದ ಸಮೀಪ ವೆಲ್ಡಿಂಗ್ ಕಾಮಗಾರಿ ನಡೆಯುತ್ತಿದ್ದ ವೇಳೆ ಬೆಂಕಿಯ ಕಿಡಿಯೊಂದು ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸಂಪರ್ಕ ಹೊಂದಿರುವ ಕೊಳವೆಗೆ ತಗುಲಿದ್ದು, ಅಲ್ಲಿಂದ ಸುಮಾರು 10 ಸಾವಿರ ಲೀಟರ್ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಟ್ಯಾಂಕ್ಗೆ ಬೆಂಕಿ ಹರಡಿದೆ. ಪರಿಣಾಮ ಟ್ಯಾಂಕ್ನಲ್ಲಿ ಭಾರೀ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಎಂ.ಆರ್.ಪಿ.ಎಲ್.ನ ತುರ್ತು ಸ್ಪಂದನಾ ತಂಡ ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ಘಟನೆಯಿಂದ ಸಂಭವಿಸಿದ ಹಾನಿ ಹಾಗೂ ಪ್ರಾಣಹಾನಿ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿವೆ.

