ಮಂಗಳೂರು: ಮಂಗಳೂರು ಮಹಾನಗರದ ವಿವಿಧ ಭಾಗಗಳಲ್ಲಿ ಸುರಿದ ಭಾರಿ ಮಳೆಯ ಪರಿಣಾಮವಾಗಿ ರಸ್ತೆಗಳು ಹದಗೆಟ್ಟಿರುವುದು, ಹೊಂಡಗಳಿಂದಾಗಿ ವಾಹನ ದುರಂತಗಳು ಸಂಭವಿಸುತ್ತಿರುವುದು, ಕಸದ ಅತಿ ಹೆಚ್ಚು ಸಂಗ್ರಹ, ಬೀದಿ ದೀಪಗಳ ನಿಷ್ಕ್ರಿಯತೆ ಮುಂತಾದ ನಗರ ಸಮಸ್ಯೆಗಳಿಗೆ ಸಂಬಂಧಿಸಿ ಶಾಸಕರು ವೇದವ್ಯಾಸ ಕಾಮತ್ ಅವರು ಗಂಭೀರ ರೀತಿಯಲ್ಲಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಾಸಕರು ಮಹಾನಗರ ಪಾಲಿಕೆ ಅಧಿಕಾರಿಗಳ ಸಭೆ ನಡೆಸಿ ತಕ್ಷಣದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. “ಮಳೆಯ ಪ್ರಮಾಣ ಎಷ್ಟೇ ಇದ್ದರೂ ತಾತ್ಕಾಲಿಕ ಕ್ರಮ ಕೈಗೊಳ್ಳುವುದು ಪಾಲಿಕೆಯಿಂದ ನಿರೀಕ್ಷಿತ. ವಾಹನ ಸವಾರರು ಹೊಂಡಗಳಿಂದಾಗಿ ಅಪಾಯಕ್ಕೆ ಒಳಗಾಗುತ್ತಿದ್ದಾರೆ. ಸಾರ್ವಜನಿಕ ಸುರಕ್ಷತೆ ಅತ್ಯಂತ ಪ್ರಮುಖ,” ಎಂದು ಅವರು ಒತ್ತಾಯಿಸಿದರು.
ನಗರದ ಗಾಂಧಿನಗರ ಶಾಲೆ ಬಳಿಯೂ ಮರೋಳಿಯ ಬಸ್ ನಿಲ್ದಾಣದಲ್ಲಿಯೂ ಕಸದ ಸಮಸ್ಯೆ ತೀವ್ರವಾಗಿದ್ದು, ಇಂತಹ ಅನೇಕ ಸ್ಥಳಗಳಿಂದ ಸಾರ್ವಜನಿಕರು ದೂರು ಸಲ್ಲಿಸಿದ್ದಾರೆ. ಒಂದು ಕಾಲದಲ್ಲಿ ‘ಸ್ವಚ್ಛತಾ ಬ್ರ್ಯಾಂಡ್’ ಎಂದೇ ಗುರುತಿಸಿಕೊಂಡ ಮಂಗಳೂರು ಇಂದು ಕಸದ ದುರವಸ್ಥೆಯಲ್ಲಿರುವುದು ವಿಷಾದನೀಯವಾಗಿದೆ ಎಂದು ಶಾಸಕರು ಹೇಳಿದರು.
ಬೀದಿ ದೀಪಗಳ ಸಾಂದರ್ಭಿಕ ಸ್ಥಿತಿ ಕುರಿತು ಮಾತನಾಡುತ್ತಾ, “ಅಲ್ಲಲ್ಲಿ ದೀಪಗಳು ಕೆಲಸ ಮಾಡುತ್ತಿಲ್ಲ ಎಂಬ ದೂರುಗಳು ವ್ಯಕ್ತವಾಗಿವೆ. ಸಾರ್ವಜನಿಕರ ಭದ್ರತೆ ದೃಷ್ಟಿಯಿಂದ ಇದು ಅತ್ಯಂತ ಗಂಭೀರ ವಿಷಯ” ಎಂದರು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಅವರು ನಾಳೆಯಿಂದಲೇ ಕ್ರಮ ಆರಂಭಿಸುವುದಾಗಿ ಶಾಸಕರಿಗೆ ಭರವಸೆ ನೀಡಿದರು.
ರಾಜ್ಯ ಸರ್ಕಾರದ ಕಡೆಗಣನೆಗೆ ಆರೋಪ:
ಶಾಸಕರು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮಂಗಳೂರು ಪಾಲಿಕೆಗೆ ಯಾವುದೇ ವಿಶೇಷ ಅನುದಾನ ಬಿಡುಗಡೆ ಆಗಿಲ್ಲ. ಕಳೆದ ಎರಡು ವರ್ಷಗಳಿಂದ ಪ್ರಾಕೃತಿಕ ವಿಪತ್ತುಗಳಿಂದ ಉಂಟಾದ ಹಾನಿಗೆ ಪರಿಹಾರ ಧನವೂ ಬರಲೇ ಇಲ್ಲ. ತುರ್ತು ಕಾಮಗಾರಿ ನಿರ್ವಹಣೆಗೆ ಸರ್ಕಾರದ ನಿರ್ಲಕ್ಷ್ಯ ಸ್ಪಷ್ಟವಾಗಿದೆ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
