ಮಂಗಳೂರು: ನಗರದ ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು, ಪಾರ್ಲರ್ ಮಾಲಕಿ ತನ್ನ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಮಸಾಜ್ ದಂಧೆ ನಡೆಯುತ್ತಿದೆ ಎಂದು ಸಹ ಅವರು ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ಸೋಮವಾರದ ಘಟನೆಯ ಕುರಿತು ಮಾಧ್ಯಮಗಳ ಮುಂದೆ ಮಾತನಾಡಿದ ಸಂತ್ರಸ್ತ ಮಹಿಳೆ, ಹಂಪನಕಟ್ಟೆ ಮತ್ತು ಜ್ಯೋತಿ ಸರ್ಕಲ್ ನಡುವಿನ ಯುನಿಸೆಕ್ಸ್ ಬ್ಯೂಟಿ ಪಾರ್ಲರ್ನಲ್ಲಿ ಬ್ಯೂಟಿಷಿಯನ್ ಆಗಿ ಕೆಲಸಕ್ಕೆ ಸೇರಿದ್ದರು.
ಘಟನೆ ನಡೆದಿದ್ದು ಹೀಗೆ:
ಪಾರ್ಲರ್ನ ಮಾಲಕರು, ಗ್ರಾಹಕರಿಗೆ ವಿಶೇಷ ಸೇವೆಗಳನ್ನು ನೀಡುವಂತೆ ಮತ್ತು ಅದಕ್ಕೆಂದೇ ರೂ. 500ರಿಂದ 1000 ಹೆಚ್ಚುವರಿ ಶುಲ್ಕ ಪಡೆಯುವಂತೆ ಸೂಚಿಸಿದ್ದರು. ಈ ಮಾತಿನಂತೆ ನಡೆದುಕೊಂಡಿದ್ದ ಯುವತಿ ಮೇಲೆ ಮಾಲಕಿ ಹಲ್ಲೆ ಮಾಡಿದ್ದಾರೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆತ್ತಲೆ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾರೆ. ಮರುದಿನ ಯುವತಿಯ ಪತಿಯನ್ನು ಕರೆಸಿ ಈ ವಿಡಿಯೋ ತೋರಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಈ ಘಟನೆಯಿಂದ ನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಗಿ ಮಹಿಳೆ ಕಣ್ಣೀರಿಟ್ಟರು.
ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರ ಸಹಾಯದಿಂದ ಸಂತ್ರಸ್ತ ಮಹಿಳೆ ಬಂದರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಸಾಜ್ ದಂಧೆಯ ಬಗ್ಗೆ ಆರೋಪ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರತಿಭಾ ಕುಳಾಯಿ, “ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಮಸಾಜ್ ದಂಧೆ ನಡೆಯುತ್ತಿರುವುದು ಸಂತ್ರಸ್ತ ಮಹಿಳೆಯ ಹೇಳಿಕೆಯಿಂದ ಸ್ಪಷ್ಟವಾಗಿದೆ. ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಬರುವ ಮಹಿಳೆಯರು ಮತ್ತು ಯುವತಿಯರನ್ನು ಬೆದರಿಸಿ ಮಸಾಜ್ ದಂಧೆಗೆ ಬಳಸಿಕೊಳ್ಳಲಾಗುತ್ತಿದೆ. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ” ಎಂದು ತಿಳಿಸಿದರು.
ಅಲ್ಲದೆ, ಪಾರ್ಲರ್ನಲ್ಲಿ ಕೆಲಸ ಮಾಡುವ ಇತರ ಯುವಕ-ಯುವತಿಯರಿಗೂ ಇದೇ ರೀತಿ ಹಲ್ಲೆ ಮತ್ತು ಬೆದರಿಕೆ ಹಾಕಲಾಗುತ್ತಿದೆ. ಆದರೆ ಮಾನ ಮರ್ಯಾದೆ ಮತ್ತು ಉದ್ಯೋಗ ಕಳೆದುಕೊಳ್ಳುವ ಭಯದಿಂದ ಯಾರೂ ಈ ಬಗ್ಗೆ ದೂರು ನೀಡುತ್ತಿಲ್ಲ ಎಂದು ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ. ಈ ರೀತಿಯ ಪರಿಸ್ಥಿತಿ ಬೇರೆ ಯಾವುದೇ ಮಹಿಳೆಗೂ ಬಾರದಿರಲಿ ಎಂದು ಅವರು ಆಶಿಸಿದ್ದಾರೆ.
