ಜೈ ತುಲುನಾಡ್ (ರಿ) ಕಾಸರಗೋಡು ವಲಯ ಸಮಿತಿಯ ವತಿಯಿಂದ ತಾ.27-07-2025 ರಂದು ಕಾಸರಗೋಡು ಕರಂದಕ್ಕಾಡ್ನಲ್ಲಿರುವ ಬಿಲ್ಲವ ಸಮಾಜ ಸೇವಾ ಸಂಘ( ರಿ )ಇಲ್ಲಿ ಮರಪಂದಿ ಆಟಿ ಕಾರ್ಯಕ್ರಮವು ನಡೆಯಿತು. ಶ್ರೀ ನಾರಾಯಣ ಗುರು ಮಂದಿರದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಬಳಿಕ ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ರಘು ಮೀಪುಗುರಿಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ನಂತರ ನಡೆದ ಮಕ್ಕಳ ತುಲು ಭಾಷಣ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ.ಧ್ಯೇಯ ವರ್ಕಾಡಿ ಪ್ರಥಮ, ಸಂಸ್ಕೃತಿ ಕುಂಬಳೆ ದ್ವಿತೀಯ ಹಾಗೂ ದರ್ಶಿತ್ ಕೆ ಆರ್ ತೃತೀಯ, ಹಿರಿಯರ ವಿಭಾಗದಲ್ಲಿ ನಿಮಿಷಾ ಎಸ್.ಬಟ್ಟಂಪಾರೆ ಪ್ರಥಮ, ದೃಶ್ಯ ಡಿ.ಬಟ್ಟಂಪಾರೆ ದ್ವಿತೀಯ,ವರ್ಷಾ ಎಸ್ ಬಟ್ಟಂಪಾರೆ ತೃತೀಯ ಬಹುಮಾನವನ್ನು ಪಡೆದರು, ನಂತರ ನಡೆದ ಸಮಾರೋಪ ಸಮಾರಂಭವು ಜೈ ತುಲುನಾಡ್ ರಿ ಕಾಸರಗೋಡು ವಲಯ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಕುಶಲಾಕ್ಷಿ.ವಿ.ಕುಲಾಲ್ ಕಣ್ವತೀರ್ಥ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಶ್ರೀಯುತ ರಘು ಕೆ ಮೀಪುಗುರಿಯವರು ಮಾತನಾಡುತ್ತಾ ಜೈ ತುಲುನಾಡ್ ಸಂಘಟನೆಯು ಈ ಕಾರ್ಯಕ್ರಮವನ್ನು ತಮ್ಮ ಸಂಘದ ಆಶ್ರಯದಲ್ಲಿ ಮಾಡಿದುದು ತುಂಬಾ ಸಂತೋಷವನ್ನುಂಟುಮಾಡಿದೆ.ತುಲು ಮಾತೃ ಭಾಷೆಯ ನಾವೆಲ್ಲರೂ ಒಟ್ಟು ಸೇರಿ ತುಲು ಸಂಸ್ಕೃತಿ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಉಳಿಸುವಲ್ಲಿ ಶ್ರಮಿಸಬೇಕಿದೆ.ಈಗಾಗಲೇ ಈ ಕೆಲಸವನ್ನು ಮಾಡುತ್ತಿರುವ ಜೈ ತುಲುನಾಡ್ ಸಂಘಟನೆಯ ಕೆಲಸ ಕಾರ್ಯಗಳು ಶ್ಲಾಘನೀಯ ಎಂದರು. ಜೈ ತುಲುನಾಡ್ ಕಾಸರಗೋಡು ಸಮಿತಿಯ ಸದಸ್ಯರು,ತುಲು ಬರಹಗಾರರೂ ಆದ ಉಮೇಶ್ ಸಾಲಿಯಾನ್ ಶಿರಿಯಾ ರವರು ಮರಪಂದಿ ಆಟಿಯ ಬಗ್ಗೆ ಮಾತನಾಡಿ,ಆಟಿ ತಿಂಗಳಲ್ಲಿ ಹಿರಿಯರು ಹೇಗೆ ಬದುಕುತ್ತಿದ್ದರು,ಈಗ ನಾವು ಹೇಗೆ ಬದುಕುತ್ತಿದ್ದೇವೆ,ಆಟಿ ತಿಂಗಳ ಆಹಾರ,ನಂಬಿಕೆ,ಆಚರಣೆ, ಆರೋಗ್ಯ ರಕ್ಷಣೆ,ಪ್ರಕೃತಿಕ ಬದಲಾವಣೆಗಳ ಬಗ್ಗೆ ವಿವರವಾಗಿ ಮಾತಾನಾಡಿದರು.ಮುಖ್ಯ ಅತಿಥಿಗಳಾದ ಯಕ್ಷಗಾನ ಹಾಗೂ ರಂಗ ಕಲಾವಿದರೂ ಆದ ಶ್ರೀಯುತ ವಾಸು ಬಾಯಾರ್ ರವರು ತುಲು ಭಾಷೆಗೆ ಪ್ರಾದೇಶಿಕ ಭಾಷೆ ಮತ್ತು ಎಂಟನೇ ಪರಿಚ್ಛೇದದಲ್ಲಿ ಸ್ಥಾನ ಮಾನ ಸಿಗಬೇಕು.ನಾನೊಬ್ಬ ಕಲಾವಿದನಾಗಿ ಗುರುತಿಸಿಕೊಳ್ಳುವಲ್ಲಿ ತುಲು ಭಾಷೆ ಮತ್ತು ತುಳುವರ ಸಹಕಾರತುಂಬಾ ಇದೆ ಎಂದರು.ತುಲು ಲಿಪಿಯನ್ನು ಮನೆ ಮನೆಗೆ ತಲುಪಿಸುವಲ್ಲಿ ಜೈ ತುಲುನಾಡ್ ಸಂಘಟನೆಯು ಉಚಿತವಾಗಿ ತುಲು ಲಿಪಿ ಕಲಿಸುತ್ತಿರುವ ಬಗ್ಗೆ ಹೆಮ್ಮೆ ಇದೆ ಎಂದರು.ಇನ್ನೊಬ್ಬ ಮುಖ್ಯ ಅತಿಥಿಗಳಾದ ಜೈ ತುಲುನಾಡ್ ರಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಉದಯ ಪೂಂಜ ತಾರಿಪಾಡಿ ಗುತ್ತು ಇವರು ಮಾತನಾಡಿ ತುಲು ಭಾಷೆ ,ತುಲು ಲಿಪಿಯ ಇತಿಹಾಸ ಹಿರಿತನ ಬಗ್ಗೆ ಮಾತನಾಡಿ ಇಂದು ಸಮಾಜದಲ್ಲಿ ಇತರ ಭಾಷೆಗಳ ಕಲಿಯುವಿಕೆ ಹಾಗೂ ಶಾಲೆಗಳಲ್ಲಿ ಸರಕಾರಿ ಕಛೇರಿಗಳಲ್ಲಿ ತುಲು ಭಾಷೆ ಮಾತಾನಾಡ ಬಾರದು ಎಂಬ ಧೋರಣೆಯಿಂದಾಗಿ ನಮ್ಮ ಮಾತೃಭಾಷೆಯಾದ ತುಲು ಸೊರಗುತ್ತಿದೆ.ನಮ್ಮ ಭಾಷೆ ಮತ್ತು ತುಲುನಾಡು ,ತುಲು ಸಂಸ್ಕೃತಿಯನ್ನು ಉಳಿಸಲು ,ರಕ್ಷಿಸಲು ನಾವೆಲ್ಲರೂ ಒಂದಾಗಬೇಕು ಎಂದರು. ಕೊನೆಗೆ ಅಧ್ಯಕ್ಷರು ಮಾತನಾಡಿ ತುಲು ಮಾತೃ ಭಾಷಿಗರಾದ ಕೆಲವು ಜಾತಿಗಳ ಮಕ್ಕಳು ತಮ್ಮ ಶೈಕ್ಷಣಿಕ ಅವಶ್ಯಕತೆ ಗಾಗಿ ಪ್ರಮಾಣಪತ್ರ ತೆಗೆಯುವಲ್ಲಿ ತುಲು ಮಾತೃ ಭಾಷಿಗರ ಜಾತಿ ಹೆಸರು ತಪ್ಪಾಗಿ ಮುದ್ರಿಸಲ್ಪಟ್ಟು ಪ್ರಮಾಣ ಪತ್ರ ಪಡೆಯುವಲ್ಲಿ ತೊಡಕನ್ನು ಅನುಭವಿಸುತ್ತಿದ್ದಾರೆ,ಇದರಿಂದಾಗಿ ಸರಕಾರಿ ಸವಲತ್ತಿನಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಸರಕಾರದ ಗಮನಕ್ಕೆ ತಂದು ಸರಿಪಡಿಸುವರೇ ತುಲುವರು ಜಾತಿಯನ್ನು ಬಿಟ್ಟು ಎಲ್ಲರೂ ಒಂದಾಗಬೇಕಿದೆ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಗೌರವಾನ್ವಿತರನ್ನು ವೇದಿಕೆಯಲ್ಲಿ ಗುರುತಿಸಿ ಗೌರವಿಸಲಾಯಿತು.ಸಭೆಯಲ್ಲಿ ಪಾರ್ದನವನ್ನು ಹಾಡಿದ ಅಶ್ವಿನಿ ರೈ ಕಾರಿಂಜ ಹಾಗೂ ತುಲು ಲಿಪಿ ಶಿಕ್ಷಕಿಯಾದ ವಿನೋದ್ ಪ್ರಸಾದ್ ರೈ ಇವರನ್ನು ಗೌರವಿಸಲಾಯಿತು. ಸಾರ್ವಜನಿಕರ ಪದ ರಂಗಿತ,ಸಬಿ ಸವಾಲು ಕಾರ್ಯಕ್ರಮಕ್ಕೆ ಮೆರುಗನ್ನು ತುಂಬಿಸಿತು. ಆಟಿಯ ವಿಶಿಷ್ಟ ಭೋಜನವನ್ನು ಉಂಡು ಎಲ್ಲರೂ ಸಂಭ್ರಮಿಸಿದರು.
ಬಿಲ್ಲವ ಸೇವಾ ಸಂಘ ದ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯನ್ನು ಕಾಸರಗೋಡು ವಲಯ ಸಮಿತಿಯ ಕಾರ್ಯದರ್ಶಿ ಶ್ರೀ ಹರಿಕಾಂತ ಕಾಸರಗೋಡು ಸ್ವಾಗತಿಸಿದರು, ಜೈ ತುಲುನಾಡ್ ರಿ ಕಾಸರಗೋಡು ಇದರ ಉಪಾಧ್ಯಕ್ಷ ರಾದ ಶ್ರೀಯುತ ಪ್ರವೀಶ್ ಕುಲಾಲ್ ಬೀರಿಕುಂಜ ವಂದಿಸಿದರು.ಸದಸ್ಯರುಗಳಾದ ಶ್ರೀ ಯಜ್ಞೇಶ್ ಮತ್ತು ಶ್ರೀಮತಿ ಪ್ರೇಮಾ ಎಂ ಕಣ್ವತೀರ್ಥ,ತೀರ್ಪುಗಾರರಾಗಿ ಸಹಕರಿಸಿದರು. ಶ್ರೀ ಉತ್ತಮ್, ಶ್ರೀ ಚಂದ್ರಶೇಖರ ತಲಪಾಡಿ, ಶ್ರೀಮತಿ ರಾಜಶ್ರೀ ತಲಪಾಡಿ,ಕಿರಣ್ ತುಲುವ, ಪ್ರಕಾಶ್ ಶೆಟ್ಟಿ ಕುಡ್ಲ, ಶ್ರೀಮತಿ ಸವಿತಾ ಕರ್ಕೇರಾ, ಕುಮಾರಿ ಚಿತ್ರಾಕ್ಷಿ , ಶ್ರೀ ನವೀನ್ ಚಿಪ್ಪಾರು .ಸಹಕರಿಸಿದರು ಶ್ರೀಮತಿ ವಿನೋದ್ ಪ್ರಸಾದ್ ರೈ ಕಾರಿಂಜ ಮತ್ತು ಶ್ರೀಯುತ ಶ್ರೀನಿವಾಸ ಆಳ್ವ ರವರು ನಿರೂಪಿಸಿದರು.


