ಮಂಗಳೂರು | ಜನವರಿ 2 ಯುನಿವೆಫ್ ಕರ್ನಾಟಕದ ವತಿಯಿಂದ ಸೆಪ್ಟೆಂಬರ್ 19ರಿಂದ ಜನವರಿ 2ರವರೆಗೆ ನಡೆಯುತ್ತಿರುವ “ಅರಿಯಿರಿ ಮನುಕುಲದ ಪ್ರವಾದಿಯನ್ನು” ಎಂಬ ಪ್ರವಾದಿ ಸಂದೇಶ ಪ್ರಚಾರ ಅಭಿಯಾನದ ಸಮಾರೋಪ ಸಮಾರಂಭವು (ಜನವರಿ 2) ಶುಕ್ರವಾರ ಸಂಜೆ 6.45ಕ್ಕೆ ನಗರದ ಪುರಭವನದಲ್ಲಿ ಜರಗಲಿದೆ ಎಂದು ಅಭಿಯಾನ ಸಂಚಾಲಕರಾದ ಯು. ಕೆ. ಖಾಲಿದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
“ಶೋಷಿತ ಸಮಾಜ, ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ)” ಎಂಬ ಕೇಂದ್ರೀಯ ವಿಷಯದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಚಿಕ್ಕಮಗಳೂರಿನ ವಿಶ್ವಧರ್ಮಪೀಠ, ಜಯಬಸವಾನಂದ ತಪೋವನದ ಡಾ. ಶ್ರೀ ಜಯಬಸವಾನಂದ ಸ್ವಾಮೀಜಿ, ಸಿ.ಆರ್.ಐ ಅಧ್ಯಕ್ಷ ಹಾಗೂ ಪ್ಯಾರಿಷ್ ಧರ್ಮಗುರು ರೆವೆ. ಡಾ. ಡೊಮಿನಿಕ್ ವಾಸ್, ಕರ್ನಾಟಕ ಸರ್ಕಾರದ ಮಾಜಿ ಸಚಿವ ಬಿ. ರಮಾನಾಥ ರೈ ಮತ್ತು ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಜನಾಬ್ ಅಬ್ದುಸ್ಸಲಾಮ್ ಪುತ್ತಿಗೆ ವಹಿಸಲಿದ್ದಾರೆ. ಸದ್ಭಾವನಾ ವೇದಿಕೆ ಜೆಪ್ಪು ಅಧ್ಯಕ್ಷ ಹಾಗೂ ಯೋಗಗುರು ದಿವಾನ್ ಕೇಶವ ಭಟ್, ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಇನಾಸ್ ರೋಡ್ರಿಗಸ್, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹೀಮ್, ಅಭಿಯಾನ ಸಂಚಾಲಕ ಯು. ಕೆ. ಖಾಲಿದ್ ಹಾಗೂ ಕಾರ್ಯದರ್ಶಿ ಮುಹಮ್ಮದ್ ಸೈಫುದ್ದೀನ್ ಸೇರಿದಂತೆ ಹಲವರು ಗಣ್ಯರಾಗಿ ಉಪಸ್ಥಿತರಿರುವರು.
ಕಾರ್ಯಕ್ರಮಕ್ಕೆ ಆಗಮಿಸುವ ಮಹಿಳೆಯರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮುಹಮ್ಮದ್ ಆಸಿಫ್, ಉಬೈದುಲ್ಲಾ ಬಂಟ್ವಾಳ್ (ಸಹ ಸಂಚಾಲಕರು – ಪ್ರವಾದಿ ಅಭಿಯಾನ), ಅಬ್ದುಲ್ ರಶೀದ್, ಸಯೀದ್ ಅಹ್ಮದ್, ಶೇಕ್ ಅಹ್ಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.




