ಮಲ್ಪೆ: ಉಡುಪಿ ಜಿಲ್ಲೆಯ ಹಿಂದೂ ಸಂಘಟನೆಯ ಮುಖಂಡರಾದ ಮಂಜು ಕೊಳ ಅವರ ಮೇಲೆ ಮಂಗಳವಾರ ರಾತ್ರಿ ಮಲ್ಪೆ ಬೀಚ್ ಸಮೀಪ ಚೂರಿ ಇರಿತ ನಡೆದ ಘಟನೆ ಸಂಭವಿಸಿದೆ. ಗಾಯಗೊಂಡ ಅವರನ್ನು ತಕ್ಷಣವೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಮಂಜು ಕೊಳ ಅವರು ಹಿಂದೂ ಯುವಸೇನೆಯ ಮುಖಂಡರಾಗಿದ್ದು, ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಅವರ ಪತಿಯಾಗಿದ್ದಾರೆ. ಬೀಚ್ ಬಳಿ ಜೋಡಿಯೊಂದರ ಪ್ರೇಮ ಸಂಬಂಧಿತ ವಿಚಾರವಾಗಿ ರಾಜಿ ಪಂಚಾಯಿತಿ ನಡೆಸಲು ಅವರು ತೆರಳಿದ್ದ ವೇಳೆ ವಾಗ್ವಾದ ಜಗಳಕ್ಕೆ ತಿರುಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಧನುಷ್ ಎಂಬ ಯುವಕನ ವಿಚಾರದಲ್ಲಿ ಮಾತಿನ ಚಕಮಕಿ ತೀವ್ರಗೊಂಡು, ಯುವಕನೊಬ್ಬ ಹೊಟ್ಟೆ ಭಾಗಕ್ಕೆ ಚೂರಿ ಇರಿದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತೀವ್ರವಾಗಿ ಗಾಯಗೊಂಡ ಮಂಜು ಕೊಳ ಅವರು ಅಲ್ಲೇ ಕುಸಿದಿದ್ದು, ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ.
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಆದರ್ಶ್ ಆಸ್ಪತ್ರೆಗೆ ದಾಖಲಾದ ಮಂಜು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಪ್ರಕರಣ ಸಂಬಂಧ ಪಲಿಮಾರು ನಿವಾಸಿಗಳಾದ ಪ್ರಜ್ಞೇಶ್, ಪುನೀತ್, ಅಮೃತ್ ಅಭಿಜಿತ್ ಸೇರಿದಂತೆ ಇನ್ನೋರ್ವ ಯುವಕನನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.

