ಮಣಿಪಾಲ : ನಗರದಲ್ಲಿರುವ ಪಬ್ ಒಂದರ ಹತ್ತಿರ ತಡರಾತ್ರಿ ಇಬ್ಬರು ಯುವಕರ ತಂಡಗಳ ನಡುವೆ ಗಲಾಟೆ ನಡೆದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಧ್ಯರಾತ್ರಿ ವೇಳೆ ನಡು ರಸ್ತೆಯಲ್ಲೇ ಯುವಕರು ಪರಸ್ಪರ ತಳ್ಳಾಡಿಕೊಂಡು ಹೊಡೆಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ತಕ್ಷಣವೇ ವಿಡಿಯೋ ಆಧರಿಸಿ ತನಿಖೆ ಆರಂಭಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಗಲಾಟೆಗೆ ಒಳಪಟ್ಟಿದ್ದ ಇಬ್ಬರೂ ತಂಡದ ಯುವಕರು ಪರಸ್ಪರ ಪರಿಚಿತರಾಗಿದ್ದು, ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ ಎನ್ನುವುದು ತಿಳಿದುಬಂದಿದೆ. ಆದಾಗ್ಯೂ, ಸಾರ್ವಜನಿಕ ಸ್ಥಳದಲ್ಲಿ ಕಿರಿಕಿರಿ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಇಬ್ಬರೂ ಗುಂಪಿನ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮರ್ ಶೆಟ್ಟಿ, ಚಂದನ್ ಸಿ. ಸಾಲ್ಯಾನ್, ಧನುಷ್ ಹಾಗೂ ಅಜಯ್ ಎಂಬ ಆರೋಪಿತರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 203/2025, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 194(2) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ತನಿಖೆ ಮುಂದುವರೆಸಿದ್ದು, ಪ್ರಕರಣದ ಇನ್ನಷ್ಟು ವಿವರಗಳು ಶೀಘ್ರದಲ್ಲೇ ಲಭ್ಯವಾಗುವ ನಿರೀಕ್ಷೆಯಿದೆ.


