ಮಂಗಳೂರು, ಮಾ.02: ದ.ಕ ಜಿಲ್ಲೆಯಲ್ಲಿ ಲಂಚದ ಆರೋಪದ ಮೇರೆಗೆ ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸರು ಮತ್ತೊಂದು ಯಶಸ್ವಿ ಬಲೆ ಬೀಸಿದ್ದಾರೆ.
ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಪ್ರಥಮ ದರ್ಜೆ ಇಲೆಕ್ಟ್ರಿಕಲ್ ಗುತ್ತಿಗೆದಾರರಾಗಿರುವ ಫಿರ್ಯಾದುದಾರರು 2025ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಾರಿ ದೀಪ ವಿಸ್ತರಣೆಯ ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಿದ್ದರು. ಈ ಕಾಮಗಾರಿಗಳ ಬಿಲ್ ಪಾವತಿಗಾಗಿ 4 ಶೇಕಡಾ ಪ್ರಮಾಣದಲ್ಲಿ ರೂ.22,600/- ಲಂಚ ನೀಡುವಂತೆ ಮಂಗಳೂರು ಲೋಕೋಪಯೋಗಿ ಇಲಾಖೆಯ ವಿದ್ಯುತ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಸ್ಡಿಎ ಸಂಪತ್ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ.
ಈ ಕುರಿತು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿತ್ತು.
ಇಂದು (02.03.2026) ಆರೋಪಿತ ಎಸ್ಡಿಎ ಸಂಪತ್ ಅವರು ಫಿರ್ಯಾದುದಾರರಿಂದ ರೂ.22,600/- (ಇಪ್ಪತ್ತೆರಡು ಸಾವಿರದ ಆರು ನೂರು) ಲಂಚದ ಹಣ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ತಕ್ಷಣವೇ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ ಶ್ರೀ ಬಿ.ಪಿ. ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕರಾದ ಶ್ರೀ ಸುರೇಶ್ ಕುಮಾರ್.ಪಿ ಹಾಗೂ ಡಾ. ಗಾನ ಪಿ ಕುಮಾರ್ ಅವರ ನೇತೃತ್ವದಲ್ಲಿ, ಪೊಲೀಸ್ ನಿರೀಕ್ಷಕಿ ಶ್ರೀಮತಿ ಭಾರತಿ ಜಿ ಮತ್ತು ಪೊಲೀಸ್ ನಿರೀಕ್ಷಕ ಶ್ರೀ ಚಂದ್ರಶೇಖರ್ ಕೆ.ಎನ್. ಅವರ ಉಸ್ತುವಾರಿಯಲ್ಲಿ ಸಿಬ್ಬಂದಿಗಳಾದ ರಾಜಪ್ಪ, ಮಹೇಶ್, ಆದರ್ಶ್, ರಾಮ ನಾಯ್ಕ, ಗಂಗಣ್ಣ, ಮಹಾದೇವ, ಪವಿತ್ರ, ಲಕ್ಷ್ಮೀ, ರವಿ ಪವಾರ್ ಹಾಗೂ ನವೀನ್ ಅವರ ತಂಡ ಕಾರ್ಯಾಚರಣೆ ನಡೆಸಿತು.
ಲೋಕಾಯುಕ್ತರ ಈ ದಿಢೀರ್ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.




