ಪಿರ್ಯಾದಿದಾರರ ತಾಯಿ ತನ್ನ ಹೆಸರಿನಲ್ಲಿರುವ ಕಂಕನಾಡಿ ಗ್ರಾಮದ ಮತ್ತು ಬಜಾಲ್ ಗ್ರಾಮದ ಜಮೀನಿನ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ಮಾಡಿಸಲು ಫೆಬ್ರವರಿ 2025 ರಂದು ಮಂಗಳೂರು ಯು.ಪಿ.ಓ.ಆರ್ ಕಛೇರಿಗೆ ಅರ್ಜಿ ಸಲ್ಲಿಸಿದ್ದು, ಪಿರ್ಯಾದಿದಾರರ ತಾಯಿಗೆ ವಯಸ್ಸಾಗಿರುವುದರಿಂದ ಪಿರ್ಯಾದಿದಾರರು ಮಂಗಳೂರು ಯು.ಪಿ.ಓ.ಆರ್ ಕಛೇರಿಗೆ ಹೋಗಿ ಕಡತದ ಬಗ್ಗೆ ವಿಚಾರಿಸಿರುತ್ತಾರೆ. ಅಲ್ಲಿನ ಸರ್ವೆಯರ್ ನಂದೀಶ್ ರವರು ಏಪ್ರಿಲ್ 2025 ರಂದು ಸರ್ವೆ ನಡೆಸಿ ನಂತರ ರೂ 6500/- ಲಂಚದ ಹಣವನ್ನು ತಾನು ಸ್ವೀಕರಿಸಿದ್ದು ಹಾಗೂ ರೂ 20,000/- ಲಂಚದ ಹಣವನ್ನು ದಿವಾಕರ್, ಬಿಜೈ, ಮಂಗಳೂರು ಮಧ್ಯವರ್ತಿಯವರ ಮೂಲಕ ಪಡೆದುಕೊಂಡಿರುತ್ತಾರೆ.
ನಂತರ ಸರ್ವೆಯರ್ ನಂದೀಶ್ ರವರು ಬಜಾಲ್ ಮತ್ತು ಕಂಕನಾಡಿ ಗ್ರಾಮದ ಎರಡೂ ಸ್ಥಳಗಳ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ನೀಡಲು ಹೆಚ್ಚುವರಿಯಾಗಿ ರೂ 18,000/- ಲಂಚದ ಹಣವನ್ನು ನೀಡುವಂತೆ ಪಿರ್ಯಾದಿದಾರರಿಗೆ ಒತ್ತಾಯಿಸಿರುತ್ತಾರೆ. ಈ ಬಗ್ಗೆ ಪಿರ್ಯಾದಿದಾರರು ಸಾಕ್ಷಿ ಪುರಾವೆಗಳೊಂದಿಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಸರ್ವೆಯರ್ ನಂದೀಶ್ ಮತ್ತು ದಿವಾಕರ್, ಬಿಜೈ, ಮಂಗಳೂರು ಮದ್ಯವರ್ತಿ ರವರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.
ಮುಂದುವರಿದು ಸರ್ವೆಯರ್ ನಂದೀಶ್ ರವರು ಜೂನ್ 2025 ರಂದು ಪಿರ್ಯಾದಿದಾರರಿಂದ ರೂ 15,000/- ಲಂಚದ ಹಣವನ್ನು ದಿವಾಕರ್, ಬಿಜೈ, ಮಂಗಳೂರು ಮಧ್ಯವರ್ತಿ ರವರ ಮೂಲಕ ಪಡೆದುಕೊಂಡಿರುತ್ತಾರೆ. ಸರ್ವೆಯರ್ ನಂದೀಶ್ ರವರು ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ನೀಡಲು ರೂ 41,500/- ಲಂಚದ ಹಣವನ್ನು ಪಡೆದುಕೊಂಡು, ಈ ದಿನ ದಿನಾಂಕ 18.06.2025 ರಂದು ಪಿರ್ಯಾದಿದಾರರಿಂದ ಹೆಚ್ಚುವರಿಯಾಗಿ ರೂ 2000/- (ಎರಡು ಸಾವಿರ) ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಸರ್ವೆಯರ್ ನಂದೀಶ್ ರವರು ಪಿರ್ಯಾದಿದಾರರಿಂದ ಇಲ್ಲಿಯವರೆಗೆ ಒಟ್ಟು ರೂ 43,500/- ಲಂಚದ ಹಣವನ್ನು ಪಡೆದುಕೊಂಡಿರುತ್ತಾರೆ. ಸರ್ವೆಯರ್ ನಂದೀಶ್ ಮತ್ತು ದಿವಾಕರ್, ಬಿಜೈ, ಮಂಗಳೂರು (ಮದ್ಯವರ್ತಿ) ರವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಈ ಕಾರ್ಯಾಚರಣೆಯಲ್ಲಿ ಶ್ರೀ ಕುಮಾರಚಂದ್ರ, ಪೊಲೀಸ್ ಅಧೀಕ್ಷಕರು (ಪ್ರಭಾರ), ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗ ರವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್, ಶ್ರೀ ಸುರೇಶ್ ಕುಮಾರ್.ಪಿ, ಪೊಲೀಸ್ ನಿರೀಕ್ಷಕರಾದ ಶ್ರೀಮತಿ ಭಾರತಿ ಜಿ, ಶ್ರೀ ಚಂದ್ರಶೇಖರ್ ಕೆ.ಎನ್ ರವರು ಮಂಗಳೂರು ಲೋಕಾಯುಕ್ತ ಸಿಬ್ಬಂದಿಗಳ ಜೊತೆ ಟ್ರಾಪ್ ಕಾರ್ಯಾಚರಣೆ ಕೈಗೊಂಡಿರುತ್ತಾರೆ.