ಒಂದುವರೆ ವರ್ಷದಲ್ಲಿ ಸಂಪೂರ್ಣ ಖುರ್ ಆನನ್ನು ಕೈ ಬರಹದ ಮೂಲಕ ರಚಿಸಿ ಸಾಧನೆಗೈದ ಈ ಬಾಲಕಿ ಹಾಸನದ ಅಬ್ದುಲ್ ಹಮೀದ್ ಯಾಸ್ಮೀನ್ ದಂಪತಿಗಳ ಸುಪುತ್ರಿ.
ಕ್ಯಾಲಿಗ್ರಫಿ ಮೂಲಕ ಕುರಾನಿನ ಆಯತ್ ಗಳನ್ನು ಬರೆಯುತ್ತಿದ್ದ ಈ ಬಾಲಕಿಗೆ ಸಂಪೂರ್ಣ ಕುರಾನನ್ನು ಕೈ ಬರಹದ ಮೂಲಕ ಬರೆಯಬೇಕೆಂಬ ಹಂಬಲವುಂಟಾಯಿತು.
ತನ್ನ ಹೆತ್ತವರೂ ಇದಕ್ಕೆ ಪ್ರೋತ್ಸಾಹ, ಸಹಕಾರ ನೀಡಿದಾಗ ಈ ಪುಣ್ಯ ಕಾರ್ಯವನ್ನು ಆರಂಭಿಸಿದ್ದಳು.
6000 ಕ್ಕೂ ಮಿಕ್ಕಿದ ಶ್ಲೋಕಗಳನ್ನು ( ಆಯತ್ ಗಳನ್ನು ) ಅರಬಿ ಲಿಪಿಯಲ್ಲಿ ಬರೆಯುವುದೆಂದರೆ ಅದು ಸಾಮಾನ್ಯ ಸಾಧನೆಯಲ್ಲ. ಪವಿತ್ರ ಖುರ್ಆನ್ ಆದ್ದರಿಂದ ಒಂದು ಅಕ್ಷರ, ಚುಕ್ಕೆ, ಸಂಕೇತ ಕೂಡಾ ತಪ್ಪದಂತೆ ಬಹಳ ನಿಗಾ ವಹಿಸಿ ಬರೆಯಬೇಕಾಗುತ್ತದೆ. ಇಂತಹ ಅಮೋಘ ಸಾಧನೆಯನ್ನು ಮಾಡಿರುವ ಈ ಕಿಶೋರಿಯ ಪ್ರಯತ್ನ ನಿಜಕ್ಕೂ ಅದ್ಭುತ.
ಒಂದುವರೆ ವರ್ಷಗಳ ಕಾಲ ತನ್ನ ತೀರ್ವ ಪರಿಶ್ರಮದಿಂದ ಬರೆಯುತ್ತಾ ಬರುತ್ತಿದ್ದ ಈ ಹುಡುಗಿಗೆ
ರಬೀಉಲ್ ಅವ್ವಲ್ ತಿಂಗಳ ಹನ್ನೆರಡನೇ ದಿನದ ಮೊದಲು ಇದನ್ನು ಸಂಪೂರ್ಣವಾಗಿ ಬರೆದು ಮುಗಿಸಬೇಕೆಂದು ಛಲ ಹುಟ್ಟಿಕೊಂಡಿತ್ತು. ಆದ್ದರಿಂದ ಹಲವು ರಾತ್ರಿ ನಿದ್ದೆಗೆಟ್ಟು ಬರೆದಿದ್ದಾಳೆ ಎನ್ನುತ್ತಾರೆ ಹೆತ್ತವರು.
ಇವಳು ದಕ್ಷಿಣ ಕರ್ನಾಟಕ ಸುನ್ನಿಸೆಂಟರ್ ಕಾರ್ಯಕರ್ತರಾದ ಇಸ್ಹಾಕ್ ಬೊಳ್ಳಾಯಿ ಅವರ ಸಹೋದರಿಯ ಪುತ್ರಿ.
ಪವಿತ್ರ ಖುರ್ಆನ್ ಕಲಿಯಲು, ಓದಲು, ಬರೆಯಲು, ಕಂಠಪಾಠ ಮಾಡಲು ಇಂತಹ ಸಾಧನೆಗಳು ಪ್ರಚೋದನೆಕಾರಿಯಾಗಿದೆ. ಅಲ್ಲಾಹು ತಆಲಾ ಈ ಸಾಧನೆಗೈದ ಕಿಶೋರಿಗೆ ಉಜ್ವಲ ಭವಿಷ್ಯತ್ತು ಕರುಣಿಸಲಿ. ಆಮೀನ್.
ಬರಹ: ಡಿ.ಐ. ಅಬೂಬಕರ್ ಕೈರಂಗಳ
