ಕುಂದಾಪುರ: ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಬಹು ಪ್ರಕರಣಗಳ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಶಶಾಂಕ್ ಶೆಟ್ಟಿ (32) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 7 ಪ್ರಕರಣಗಳು ದಾಖಲಾಗಿದ್ದು, ಹೆಬ್ರಿ, ಕಲಘಟಕಿ, ಕೋಟ ಹಾಗೂ ಬೆಂಗಳೂರು ಚಂದ್ರಲೇಔಟ್ ಠಾಣೆಗಳಲ್ಲೂ ತಲಾ ಪ್ರಕರಣಗಳಿವೆ. ಕಳ್ಳತನ, ಸುಲಿಗೆ ಹಾಗೂ ಹನಿಟ್ರ್ಯಾಪ್ ಸೇರಿದಂತೆ ಒಟ್ಟು 11 ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ.
ನ್ಯಾಯಾಲಯವು ಈತನ ವಿರುದ್ಧ ಈಗಾಗಲೇ 12 ಬಾರಿ ವಾರಂಟ್ ಜಾರಿ ಮಾಡಿದ್ದರೂ, ಸುಮಾರು ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಪರಾರಿಯಾಗಿದ್ದನು. ಆರೋಪಿ ಪತ್ತೆಗೆ ಪೊಲೀಸರು ನಿರಂತರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು.
ಖಚಿತ ಮಾಹಿತಿಯ ಆಧಾರದಲ್ಲಿ ಫೆಬ್ರವರಿ 15ರಂದು ಕುಂದಾಪುರ ತಾಲೂಕು ಬಿದ್ಮಲ್ ಕಟ್ಟೆ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಕುಂದಾಪುರ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಎ. ಕಾಯ್ಕಿಣಿ ಅವರ ಮಾರ್ಗದರ್ಶನದಲ್ಲಿ, ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕರಾದ ನಾಸೀರ್ ಹುಸೇನ್ ಮತ್ತು ಚಂದ್ರಕಲಾ ಎಂ. ಪತ್ತಾರ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಜು ಬಿ., ಗುರುಪ್ರಸಾದ್, ಕಿರಣ್ ಬಿ. ಪಾಟೀಲ್ ಹಾಗೂ ಚಂದ್ರ ಶೆಟ್ಟಿ ಕಾರ್ಯಾಚರಣೆ ನಡೆಸಿದರು.
ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

