ಮನಪಾ ವ್ಯಾಪ್ತಿಯಲ್ಲಿ ಬೇಸಿಗೆಗೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಒಂದು ವಾರದೊಳಗೆ ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳಿ ಎಂದು ಪಾಲಿಕೆ ಅಧಿಕಾರಿಗಳಿಗೆ ಶಾಸಕ ವೇದವ್ಯಾಸ ಕಾಮತ್ ರವರು ಸೂಚನೆ ನೀಡಿದರು.
ಪಾಲಿಕೆಯ ವಾರ್ಡ್ ಸಂಖ್ಯೆ 25, 26, 27, 41 ಹಾಗೂ 53 ರಲ್ಲಿ ಕುಡಿಯುವ ನೀರಿನ ಅಭಾವವುಂಟಾಗಿದ್ದು ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಪಾಲಿಕೆಯಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಕುಡಿಯುವ ನೀರಿನ ಸಮಸ್ಯೆ ಎದುರಾದ ತಕ್ಷಣ ಜನರ ಸಮಸ್ಯೆಗೆ ತುರ್ತಾಗಿ ಸ್ಪಂದನೆ ಸಿಗುತ್ತಿತ್ತು. ಯಾವಾಗ ಬಿಜೆಪಿಯ ಅವಧಿ ಅಂತ್ಯವಾಯಿತೋ ಅಲ್ಲಿಂದ ಜನರ ಸಮಸ್ಯೆಯನ್ನು ಕೇಳುವವರೇ ಇಲ್ಲವಾಗಿದೆ. ಸದ್ಯ ಪಾಲಿಕೆಯು ಕಾಂಗ್ರೆಸ್ ನೇತೃತ್ವದ ಆಡಳಿತಾಧಿಕಾರಿಯ ಮೂಲಕ ನಡೆಯುತ್ತಿದ್ದು ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರವೇ ಇಲ್ಲವಾಗಿದೆ. ಕೂಡಲೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಸೂಚನೆ ನೀಡಿದರು.
ಬಿಜೆಪಿಯ ನಿಕಟಪೂರ್ವ ಪಾಲಿಕೆ ಸದಸ್ಯರುಗಳಾದ ಪೂರ್ಣಿಮಾ ಎಂ, ಗಣೇಶ್ ಕುಲಾಲ್, ಜಯಲಕ್ಷ್ಮಿ ಶೆಟ್ಟಿ, ಜಗದೀಶ್ ಶೆಟ್ಟಿ, ಬಿಜೆಪಿ ಪ್ರಮುಖರಾದ ಚಂದ್ರಶೇಖರ್ ಬಜಾಲ್ ತಮ್ಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಜನರು ಅನುಭವಿಸುತ್ತಿರುವ ತೊಂದರೆಯ ಬಗ್ಗೆ ವಿವರಿಸಿದರು. ಪಾಲಿಕೆಯ ಕಾರ್ಯಪಾಲಕ ಹಿರಿಯ ಇಂಜಿನಿಯರ್ ನರೇಶ್ ಶೆಣೈ, ವಿವಿಧ ಅಧಿಕಾರಿಗಳು, ಮುರುಳೀಧರ್ ನಾಯಕ್, ಸ್ಥಳೀಯರು ಉಪಸ್ಥಿತರಿದ್ದರು.

