ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಹತ್ಯೆಗೀಡಾದ ವ್ಯಕ್ತಿಯನ್ನು ಗಂಗಾವತಿಯ ದೇವಿಕ್ಯಾಂಪ್ ಮೂಲದ ವೆಂಕಟೇಶ್ ಕುರುಬರ (31) ಎಂದು ಗುರುತಿಸಲಾಗಿದೆ. ಅವರು ಗಂಗಾವತಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದರು.
ಮಧ್ಯರಾತ್ರಿ ಸುಮಾರು 2 ಗಂಟೆ ಸುಮಾರಿಗೆ, ವೆಂಕಟೇಶ್ ಸ್ನೇಹಿತರೊಂದಿಗೆ ಊಟ ಮುಗಿಸಿ ಬೈಕ್ನಲ್ಲಿ ಗಂಗಾವತಿಯತ್ತ ಹೊರಟಿದ್ದರು. ಈ ವೇಳೆ ಗಂಗಾವತಿ – ಕೊಪ್ಪಳ ರಸ್ತೆಯಲ್ಲಿರುವ ಲೀಲಾವತಿ ಖಾಸಗಿ ಆಸ್ಪತ್ರೆ ಎದುರು ಅಡಚಣೆ ಮಾಡಿದ್ದ ದುಷ್ಕರ್ಮಿಗಳ ಗುಂಪು, ಮಾರಕಾಸ್ತ್ರಗಳಾದ ಲಾಂಗ್ ಹಾಗೂ ಮಚ್ಚುಗಳಿಂದ ಅವರನ್ನು ಗಂಭೀರವಾಗಿ ಗಾಯಗೊಳಿಸಿ ಕೊಲೆಗೈದಿದೆ.
ಘಟನೆ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸುದ್ದಿ ತಿಳಿದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಸಿದ್ಧನಗೌಡ ಪಾಟೀಲ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಗಂಗಾವತಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಚುರುಕು ಕಾರ್ಯಾಚರಣೆ ಆರಂಭಿಸಿದ್ದಾರೆ.


