ಕಾರ್ಕಳ:
ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜುಗಾರಿ ಆಟ ನಡೆಸುತ್ತಿದ್ದ ಅಡ್ಡೆಗೆ ಕಾರ್ಕಳ ನಗರ ಪೊಲೀಸರು ದಾಳಿ ನಡೆಸಿ 8 ಮಂದಿಯನ್ನು ಬಂಧಿಸಿರುವ ಘಟನೆ ಫೆಬ್ರವರಿ 7ರ ರಾತ್ರಿ ನಡೆದಿದೆ.
ಖಚಿತ ಮಾಹಿತಿಯ ಆಧಾರದಲ್ಲಿ ಫೆಬ್ರವರಿ 7ರಂದು ರಾತ್ರಿ ಸುಮಾರು 8.45ರ ವೇಳೆಗೆ, ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಬೈಲ್ ಬೆಟ್ಟು ಪ್ರದೇಶದಲ್ಲಿರುವ ಸಾದ್ವಿನ್ ಎಂಬುವರ ಮನೆಯ ಮೊದಲ ಮಹಡಿಯಲ್ಲಿ ಹಣವನ್ನು ಪಣವಾಗಿರಿಸಿ ಇಸ್ಪೀಟ್ ಎಲೆಗಳಿಂದ ‘ಅಂದರ್–ಬಾಹರ್’ ಜುಗಾರಿ ಆಟ ನಡೆಯುತ್ತಿದೆ ಎಂಬ ಮಾಹಿತಿ ಪಡೆದ ಕಾರ್ಕಳ ನಗರ ಪೊಲೀಸ್ ಠಾಣೆಯ ಪಿಎಸ್ಐ ಮುರುಳೀಧರ ನಾಯ್ಕ್ ನೇತೃತ್ವದ ತಂಡ ದಾಳಿ ನಡೆಸಿತು.
ದಾಳಿಯ ಸಂದರ್ಭದಲ್ಲಿ ಜುಗಾರಿ ಆಟದಲ್ಲಿ ತೊಡಗಿದ್ದ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸ್ಥಳದಿಂದ 22,690 ರೂ. ನಗದು, 52 ಬಳಸಿದ ಇಸ್ಪೀಟ್ ಎಲೆಗಳು, 16 ಹೊಸ ಇಸ್ಪೀಟ್ ಎಲೆಗಳ ಪ್ಯಾಕೆಟ್ಗಳು, 10 ಪ್ಲಾಸ್ಟಿಕ್ ಕುರ್ಚಿಗಳು, 4 ಪ್ಲಾಸ್ಟಿಕ್ ಮೇಜುಗಳು ಹಾಗೂ 9 ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿಗಳಲ್ಲಿ ಉಮ್ಮರ ಫಾರೂಕ್, ಅಬ್ದುಲ್ ಅಜೀಜ್, ಸತೀಶ ಎಸ್. ಪ್ರಭು, ಅಬ್ದುಲ್ ರಹಿಮಾನ್, ಸಮೀರ್, ಸುಲೇಮಾನ್, ಇರ್ಫಾನ್ ಹಾಗೂ ಚೇತಕ್ ಸೇರಿದ್ದಾರೆ. ಬಂಧಿತರೆಲ್ಲರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇನ್ನು ದಾಳಿ ವೇಳೆ ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸ್ ತಂಡ ಶೋಧ ಕಾರ್ಯಾಚರಣೆ ಮುಂದುವರಿಸಿದೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/26 ಅಡಿಯಲ್ಲಿ ಕೆಪಿ ಆಕ್ಟ್ ಹಾಗೂ ಬಿಎನ್ಎಸ್ ಕಲಂಗಳಂತೆ ಪ್ರಕರಣ ದಾಖಲಿಸಲಾಗಿದೆ.

