ಉಡುಪಿ | ಜನವರಿ 1, 2026 ಸಂತೆಕಟ್ಟೆ, ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಔರೋ ಸ್ಕಿಲ್ಲಿಯುವಂ ಅಕಾಡೆಮಿ ಎಲ್ಎಲ್ಪಿ ಸಂಸ್ಥೆಯ ಸ್ಥಾಪಕರಾದ ಅನುಶ್ರೀ ಚಂದ್ರಶೇಖರ ಹಾಗೂ ಅಭಿಷೇಕ್ ಜಿ. ಅವರಿಗೆ ಜೀವ ಬೆದರಿಕೆ, ಸುಲಿಗೆ ಮತ್ತು ಸಂಸ್ಥೆ ಮುಚ್ಚುವಂತೆ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿಗಳ ವಿರುದ್ಧ ತ್ವರಿತ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತರಿಗೆ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ (ರಿ) ಉಡುಪಿ ಜಿಲ್ಲಾ ಘಟಕವು ಒತ್ತಾಯಿಸಿದೆ.

ಈ ಕುರಿತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ಅವರು, ಈ ಪ್ರಕರಣ ಅತ್ಯಂತ ಗಂಭೀರ ಹಾಗೂ ಸಮಾಜದ ಶಾಂತಿ ಮತ್ತು ಕಾನೂನು ವ್ಯವಸ್ಥೆಗೆ ಸವಾಲು ಎಸೆಯುವಂತಹದ್ದು ಎಂದು ಹೇಳಿದರು.
ಸಂತ್ರಸ್ತರು ನೀಡಿರುವ ದೂರಿನ ಪ್ರಕಾರ, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲ ಸಿಬ್ಬಂದಿಗಳು ನಂಬಿಕೆ ದ್ರೋಹ ನಡೆಸಿ ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿ ಬೇರೆ ಸಂಸ್ಥೆಗಳಿಗೆ ಸೆಳೆಯುವ ಪ್ರಯತ್ನ ನಡೆಸಿದ್ದರು. ಈ ಕುರಿತು ಪೊಲೀಸ್ ದೂರು ನೀಡಿದ್ದಕ್ಕೆ ಪ್ರತಿಕಾರವಾಗಿ, ದಿನಾಂಕ 12-12-2025ರಂದು ಸಂತೆಕಟ್ಟೆಯ ಮಧುವನ ಹೋಟೆಲ್ನಲ್ಲಿ ಆರೋಪಿಗಳು ಸಂಘಟಿತವಾಗಿ ಸಭೆ ನಡೆಸಿ ₹2 ಕೋಟಿ ಹಣ ನೀಡಬೇಕು ಅಥವಾ ಅಕಾಡೆಮಿಯನ್ನು ಮುಚ್ಚಬೇಕು, ಇಲ್ಲವಾದರೆ ಜೀವದಿಂದ ಮುಗಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮ ಸಂಖ್ಯೆ 211/2025ನ್ನು BNS ಕಲಂ 308(5), 352, 351(2) ಹಾಗೂ R/W 3(5) BNS ಅಡಿಯಲ್ಲಿ ದಾಖಲಿಸಲಾಗಿದ್ದು, ಆರೋಪಿಗಳು ಹಣಬಲ ಮತ್ತು ಪ್ರಭಾವ ಹೊಂದಿರುವ ಸಮಾಜವಿರೋಧಿ ಹಿನ್ನೆಲೆಯವರು ಎನ್ನಲಾಗಿದೆ. ಇದರಿಂದಾಗಿ ಸಂತ್ರಸ್ತರ ಕುಟುಂಬ ನಿರಂತರ ಜೀವಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವೇದಿಕೆಗೆ ಸಂತ್ರಸ್ತರು ಮನವಿ ಸಲ್ಲಿಸಿ ವಿನಂತಿಸಿ ಕೊಂಡಿದ್ದಾರೆ ಎಂದು ವೇದಿಕೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ (ರಿ) ಉಡುಪಿ ಜಿಲ್ಲಾ ಘಟಕವು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಕೆಳಕಂಡಂತೆ ಆಗ್ರಹಿಸಿದೆ:
• ಪ್ರಕರಣದ ಆರೋಪಿಗಳ ವಿರುದ್ಧ ತ್ವರಿತ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು
• ಸಂತ್ರಸ್ತರು ಹಾಗೂ ಅವರ ಕುಟುಂಬಕ್ಕೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು
• ಆರೋಪಿಗಳ ಆರ್ಥಿಕ ಮೂಲಗಳು, ವ್ಯವಹಾರಗಳು ಮತ್ತು ಅಕ್ರಮ ಚಟುವಟಿಕೆಗಳ ಕುರಿತು ಆಳವಾದ ತನಿಖೆ ನಡೆಸಬೇಕು
• ಯಾವುದೇ ರೀತಿಯ ಬೆದರಿಕೆ, ಪ್ರತಿಕಾರ ಅಥವಾ ಒತ್ತಡಕ್ಕೆ ಅವಕಾಶ ನೀಡದಂತೆ ಕಠಿಣ ನಿಗಾ ವಹಿಸಬೇಕು
ಸಮಾಜದಲ್ಲಿ ಶಾಂತಿ, ನ್ಯಾಯ ಮತ್ತು ಕಾನೂನು ಪ್ರಾಬಲ್ಯ ಕಾಪಾಡುವ ದೃಷ್ಟಿಯಿಂದ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಸಂತ್ರಸ್ತರಾದ ಅನುಶ್ರೀ ಚಂದ್ರಶೇಖರ ಮತ್ತು ಅಭಿಷೇಕ್ ಜಿ. ಅವರು ತುಳುನಾಡ ರಕ್ಷಣಾ ವೇದಿಕೆಗೆ ಸಲ್ಲಿಸಿರುವ ದೂರು ಅರ್ಜಿಯನ್ನು ಈ ಮನವಿಯೊಂದಿಗೆ ಲಗತ್ತಿಸಲಾಗಿದೆ ಎಂದು ತಿಳಿಸಲಾಗಿದೆ. ಎಸ್. ಪಿ. ಯವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಉಡುಪಿ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜಾ ಕೊಳಲಗಿರಿ, ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಯ ಪೂಜಾರಿ ಲಕ್ಷ್ಮಿ ನಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ, ಜಿಲ್ಲಾಉಪಾದ್ಯಕ್ಷರಾದ ಜಯರಾಮ್ ಪೂಜಾರಿ ಉಮೇಶ್ ಶೆಟ್ಟಿ ಹಾವಂಜೆ , ಬ್ರಹ್ಮಾವರ ತಾಲೂಕು ಪ್ರಧಾನ ಕಾರ್ಯದರ್ಶಿ ಶರತ್ ಆರೂರು, ಜಿಲ್ಲಾ ಕಾರ್ಮಿಕ ಸಂಘಟನಾ ಕಾರ್ಯದರ್ಶಿ ರೋಷನ್ ಬಂಗೇರ, ಬೈರಂಪಳ್ಳಿ ಘಟಕ ಅಧ್ಯಕ್ಷ ಕೃಷ್ಣಾನಂದ ನಾಯಕ್, ಮಹಿಳಾ ಜಿಲ್ಲಾಧ್ಯಕ್ಷೆ ಸುನಂದ ಕೋಟ್ಯಾನ್, ಕಾಪು ಮಹಿಳಾಧ್ಯಕ್ಷೆ ಅನುಸೂಯ ಶೆಟ್ಟಿ , ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಮತಾ ಅಮೀನ್, ಮಹಿಳಾ ಮುಖಂಡರುಗಳಾದ ಜ್ಯೋತಿ ಆರ್, ಹರಿಣಾಕ್ಷಿ , ರಾಜೇಶ್ವರಿ, ಗುಲಾಬಿ, ಮಮತ ಎಂ, ಸುಲೋಚನ ಪೂಜಾರಿ, ರೋಹಿಣಿ, ಕೃಷ್ಣ ಸೇರಿದಂತೆ ಹಲವು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಮುಖಂಡರುಗಳು ಉಪಸ್ಥಿತರಿದ್ದರು.
ಬಂಧನ ಪಕ್ರಿಯೆ ವಿಳಂಬವಾದಲ್ಲಿ ಮುಂದಿನ ದಿನದಲ್ಲಿ ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ ಮಂಡಳಿ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ನೇತ್ರತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಬಳಿಯಲ್ಲಿ ಪ್ರತಿಭಟನಾ ಸಭೆ ಹಮ್ಮಿ ಕೊಳ್ಳಲಾಗುವುದು ಎಂದು ವೇದಿಕೆ ಪಧಾಧಿಕಾರಿಗಳು ತಮ್ಮ ಹಕ್ಕೋತ್ತಯ ಮಂಡಿಸಿದರು






