ಕೊಚ್ಚಿ : ಕೇರಳದ ಕೊಚ್ಚಿಯಲ್ಲಿ ಅಚ್ಚರಿ ಹಾಗೂ ಆತಂಕ ಹುಟ್ಟಿಸುವ ಹನಿಟ್ರಾಪ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಿವುಡು ಮತ್ತು ಮೂಗನಾಗಿರುವ ವಿಕಲಚೇತನ ಯುವಕನನ್ನು ಪ್ರೀತಿಯ ನಾಟಕವಾಡಿ ಲಾಡ್ಜ್ಗೆ ಕರೆಸಿಕೊಂಡ ಯುವತಿ ಹಾಗೂ ಆಕೆಯ ಮೂವರು ಸ್ನೇಹಿತರು ಸೇರಿ ಹಲ್ಲೆ ನಡೆಸಿ, ಫೋಟೋಗಳ ಮೂಲಕ ಬ್ಲ್ಯಾಕ್ಮೇಲ್ ಮಾಡಲು ಯತ್ನಿಸಿದ ಘಟನೆ ಪನಂಪಿಳ್ಳಿ ನಗರದಲ್ಲಿ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ನಾರ್ತ್ ಪರವೂರ್ ಮೂಲದ ಸ್ವಪ್ನಾ ಎಂಬ ಯುವತಿ ತನ್ನ ಸ್ನೇಹಿತರಾದ ಜಾನ್ ರಾಹುಲ್, ಅಮಲ್ ಮತ್ತು ಆನಂದ್ ಅವರೊಂದಿಗೆ ಸೇರಿ ಕೊಲ್ಲಂ ಜಿಲ್ಲೆಯ ನಿಲ್ಲಿಲ್ಲಾ ನಿವಾಸಿ ಅಮಲ್ ದೇವ್ ಎಂಬ ಯುವಕನನ್ನು ಗುರಿಯಾಗಿಸಿಕೊಂಡಿದ್ದಳು. ಸಾಮಾಜಿಕ ಜಾಲತಾಣದ ಮೂಲಕ ಯುವಕನೊಂದಿಗೆ ಸಂಪರ್ಕ ಬೆಳೆಸಿ, ಕಳೆದ ಕೆಲವು ದಿನಗಳಿಂದ ಪ್ರೀತಿಯ ನಾಟಕವಾಡಿ ಅವನ ವಿಶ್ವಾಸ ಗಳಿಸಿದ್ದಳು ಎಂದು ತಿಳಿದುಬಂದಿದೆ.
25ರಂದು ಪನಂಪಿಳ್ಳಿಯಲ್ಲಿರುವ ಲಾಡ್ಜ್ಗೆ ಬರುವಂತೆ ಸ್ವಪ್ನಾ ಯುವಕನಿಗೆ ಒತ್ತಾಯಿಸಿದ್ದಳು. ಯುವಕನು ಬೀಚ್ನಲ್ಲಿ ಭೇಟಿಯಾಗೋಣ ಎಂದು ಸಲಹೆ ನೀಡಿದರೂ, ಆಕೆ ಲಾಡ್ಜ್ನಲ್ಲೇ ಭೇಟಿ ಮಾಡಲು ಹಠ ಹಿಡಿದಿದ್ದಳು. ಅದರಂತೆ ಸಂಜೆ ಸುಮಾರು 6 ಗಂಟೆಗೆ ಅಮಲ್ ದೇವ್ ಲಾಡ್ಜ್ಗೆ ತಲುಪಿದ್ದಾನೆ.
ಆದರೆ ಯುವಕನಿಗೆ ತಿಳಿಯದೆ, ಕೊಠಡಿಯ ಬಾತ್ರೂಂನಲ್ಲಿ ಆಕೆಯ ಮೂವರು ಸ್ನೇಹಿತರು ಪೂರ್ವಯೋಜಿತವಾಗಿ ಅಡಗಿ ಕುಳಿತಿದ್ದರು. ಯುವಕ ಕೊಠಡಿಗೆ ಬಂದ ನಂತರ ಸ್ವಪ್ನಾ ಆತನ ಮೇಲೆ ಶಾರೀರಿಕ ಸಂಬಂಧಕ್ಕಾಗಿ ಒತ್ತಡ ಹೇರಿದಳು. ವಿವಿಧ ಭಂಗಿಗಳಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ತೆಗೆದು ನಂತರ ಅವುಗಳನ್ನು ಬಳಸಿ ಬ್ಲ್ಯಾಕ್ಮೇಲ್ ಮಾಡುವ ಸಂಚು ಇವರದ್ದಾಗಿತ್ತು ಎನ್ನಲಾಗಿದೆ.
ಯುವಕ ಇದಕ್ಕೆ ನಿರಾಕರಿಸಿದ ಕ್ಷಣವೇ ಪರಿಸ್ಥಿತಿ ತೀವ್ರಗೊಂಡಿತು. ಬಾತ್ರೂಂನಲ್ಲಿ ಅಡಗಿ ಕುಳಿತಿದ್ದ ಮೂವರು ಹೊರಬಂದು ಅಮಲ್ ದೇವ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದರು. ಬಳಿಕ ಯುವಕನನ್ನು ಬೆತ್ತಲೆಗೊಳಿಸಿ ಫೋಟೋ ತೆಗೆದು, ಹಣ ನೀಡದಿದ್ದರೆ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದರು.
ಇಷ್ಟೇ ಅಲ್ಲದೆ, ಯುವಕನ ಗೂಗಲ್ ಪೇ ಪಿನ್ ಸಂಖ್ಯೆ ಪಡೆದು ಹಣ ದೋಚಲು ಪ್ರಯತ್ನಿಸಿದರು. ಆದರೆ ಖಾತೆಯಲ್ಲಿ ಹಣ ಕಡಿಮೆ ಇದ್ದುದರಿಂದ ಆರೋಪಿಗಳು ಯುವಕನನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುವ ಮೂಲಕ ಆರೋಪಿಗಳ ಸುಳಿವು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.

