ಹಾಸನ, ಸೆಪ್ಟೆಂಬರ್ 24:
ಹಾಸನದ ಹೆಸರಾಂತ ಹಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ ಬಡ ಮಹಿಳೆ ತೀವ್ರ ನೋವು ಅನುಭವಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ರಾಡ್ ತೆಗೆಸಿಕೊಳ್ಳಲು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ತಪ್ಪಾಗಿ ಮತ್ತೊಂದು ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ, ಬೂಚನಹಳ್ಳಿ ಕಾವಲು ಗ್ರಾಮದ ನಿವಾಸಿ ಜ್ಯೋತಿ ಎಂಬವರಿಗೆ ಸುಮಾರು ಎರಡು ವರ್ಷಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಎಡಗಾಲು ಮುರಿದಿತ್ತು. ಆಗ ಶಸ್ತ್ರಚಿಕಿತ್ಸೆ ಮೂಲಕ ಕಾಲಿಗೆ ಕಬ್ಬಿಣದ ರಾಡ್ ಅಳವಡಿಸಲಾಗಿತ್ತು. ಇತ್ತೀಚೆಗೆ ಆ ಕಾಲಿನಲ್ಲಿ ಮತ್ತೆ ನೋವು ಕಾಣಿಸಿಕೊಂಡ ಕಾರಣ, ಅವರು ಹಾಸನದ ಹಿಮ್ಸ್ ಆಸ್ಪತ್ರೆಗೆ ಹೋಗಿದ್ದರು.
ಅಲ್ಲಿ ವೈದ್ಯರಾದ ಡಾ. ಸಂತೋಷ್ ಪರಿಶೀಲನೆ ನಡೆಸಿ, ಹಿಂದಿನ ರಾಡ್ ತೆಗೆಯಬೇಕೆಂದು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದರು. ಬಳಿಕ, ಶನಿವಾರ ಜ್ಯೋತಿ ಆಸ್ಪತ್ರೆಗೆ ದಾಖಲಾಗಿದ್ದು, ನಿಶ್ಚೇತಕ ನೀಡಿದ ನಂತರ ಶಸ್ತ್ರಚಿಕಿತ್ಸೆಗೆ ತಯಾರಿ ನಡೆಯಿತು. ಆದರೆ ವೈದ್ಯರು ಎಡಗಾಲು ಬದಲಿಗೆ ತಪ್ಪಾಗಿ ಬಲಗಾಲಿಗೆ ಕತ್ತರಿಸಿ ಆಪರೇಷನ್ ಆರಂಭಿಸಿದರು.
ಘಟನೆಯ ದೌರ್ಭಾಗ್ಯ ಇಷ್ಟೇ ಅಲ್ಲ – ತಪ್ಪು ಗಮನಕ್ಕೆ ಬಂದು ಬಲಗಾಲಿಗೆ ಬ್ಯಾಂಡೇಜ್ ಹಾಕಿದ ನಂತರ ಮಾತ್ರ ಎಡಗಾಲಿಗೆ ಸರಿಯಾದ ಆಪರೇಷನ್ ಮಾಡಿ, ರಾಡ್ ತೆಗೆದುಹಾಕಲಾಯಿತು. ಆದರೆ ಈ ಯಡವಟ್ಟಿನಿಂದ ಮಹಿಳೆ ತೀವ್ರ ನೋವು ಅನುಭವಿಸುತ್ತಿದ್ದಾರೆ.
ಈ ಬಗ್ಗೆ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಆಸ್ಪತ್ರೆ ಮೇಲಾಧಿಕಾರಿಗಳ ಬಳಿ ದೂರು ನೀಡಿದ್ದಾರೆ. ಆಸ್ಪತ್ರೆಯಲ್ಲಿ ನಡೆದ ಈ ಅಪರಾಧಮಟ್ಟದ ನಿರ್ಲಕ್ಷ್ಯಕ್ಕೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುವಂತೆ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಒತ್ತಾಯಿಸಿದ್ದಾರೆ.






