ಮಂಗಳೂರು : ದ.ಕ. ಜಿಲ್ಲಾ ಪುಟ್ಬಾಲ್ ಸಂಸ್ಥೆ ಕಳೆದ 26 ವರ್ಷಗಳಿಂದ ನಡೆಸುತ್ತಾ ಬಂದಿರುವ ಅಂತರ್ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು, ಪದವಿ ಕಾಲೇಜಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಗಳಿಗಾಗಿ ನಡೆಸುತ್ತಾ ಬರುತ್ತಿದ್ದು, 27ನೇ ವರ್ಷದ ಪಂದ್ಯಾವಳಿ ಆಗೋಸ್ಟ್ 4ನೇ ತಾರೀಖು ಸೋಮವಾರ ಪ್ರಾರಂಭವಾಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಡಿ.ಎಂ ಅಸ್ಲಾಂ ರವರು ತಿಳಿಸಿದ್ದಾರೆ.
ಮಂಗಳೂರು ನೆಹರೂ ಮೈದಾನಕ್ಕೆ ಹೊಸ ಟರ್ಪ್ ಅಳವಡಿಸಿದ ನಂತರ ಈ ಪಂದ್ಯಾವಳಿಯನ್ನು ಆ ಮೈದಾನದಲ್ಲಿ ನಡೆಸಬೇಕೆಂದು ಬಯಕೆ ನಮ್ಮದಾಗಿತ್ತು. ಆದರೆ ಭಾರೀ ಮಳೆಯ ಕಾರಣ ಈ ಮೈದಾನದ ಕೆಲಸ ವಿಳಂಬವಾದ ಕಾರಣ ಈಗ ಈ ಪಂದ್ಯಾವಳಿ ಎರಡು ತಾಣಗಳಲ್ಲಿ ನಡೆಯಲಿದೆ. ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಡಶಾಲೆಯ ಬಾಲಕರ ಹಾಗೂ ಬಾಲಕಿಯರ ಪಂದ್ಯವಾಳಿಗಳು ನಗರದ ಮಂಗಳಾ ಸ್ಟೇಡಿಯಂ ಪಕ್ಕದಲ್ಲಿರುವ ಕರಾವಳಿ ಉತ್ಸವ ಮೈದಾನದಲ್ಲಿ ನಡೆದರೆ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಪಂದ್ಯಾಟ ನಗರದ ಹೊರಭಾಗದ ಮಂಜನಾಡಿ ಗ್ರಾಮದ ಕಿನ್ಯಾ ಎಂಬಲ್ಲಿರುವ ಯೇನೆಪೋಯ ಯುನಿವರ್ಸಿಟಿ ಕ್ಯಾಂಪಸ್ ಮೈದಾನದಲ್ಲಿ ನಡೆಯಲಿದೆ. ಸುಮಾರು 200 ಕ್ಕೂ ಮಿಕ್ಕಿದ ಶಾಲಾ ಕಾಲೇಜು ತಂಡ ನೋಂದಾಯಿಸಿದ್ದು, 12 ದಿನಗಳ ಕಾಲ ಈ ಪಂದ್ಯಾಟ ನಡೆಯಲಿದ್ದು, ತಾರೀಕು 15-08-2025 ಸ್ವಾತಂತ್ರ್ಯ ದಿನಾಚರಣೆಯಂದು ಫೈನಲ್ ಪಂದ್ಯಾಟಗಳು ನಡೆಯಲಿದೆ ಎಂದು ಹೇಳಿದರು.
ಈಗಾಗಲೇ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ಈ ಪುಟ್ಬಾಲ್ ಆಟದ ಕಾವು ಹೆಚ್ಚಿದ್ದು, ಮಂಗಳೂರಿನ ಹೊರ ಭಾಗದ ಹಲವು ಶಾಲಾ ಕಾಲೇಜುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದೆ. ಸುಮಾರು 75 ವರ್ಷಗಳಿಂದ ಪುಟ್ಬಾಲ್ ಪಂದ್ಯಾಟ ನಡೆಸುತ್ತಾ ಬರುತ್ತಿರುವ ನಮ್ಮ ಸಂಸ್ಥೆ ಇಂಡಿಪೆಂಡೆನ್ಸ್ ಕಪ್ ಪಂದ್ಯಾವಳಿ ಆರಂಭಿಸಿದ ನಂತರದಲ್ಲಿ ಹಲವಾರು ಆಟಗಾರರು ರಾಷ್ಟ್ರ, ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಅದರಲ್ಲೂ ಹಲವು ಬಾಲಕಿಯರು ರಾಜ್ಯ ತಂಡವನ್ನು ಪ್ರತಿನಿಧಿಸಿ ಆಟವಾಡಿದ್ದಾರೆ ಎಂದರು.
ಈ ಪಂದ್ಯಾವಳಿಯನ್ನು ಮಂಗಳೂರು ನಗರ ದಕ್ಷಿಣದ ಶಾಸಕರಾದ ಶ್ರೀ ವೇದವ್ಯಾಸ ಕಾಮತರು ಉದ್ಘಾಟಿಸಲಿದ್ದು, ಅತಿಥಿಯಾಗಿ ರಾಜೇಂದ್ರ ಕುಮಾರ್ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಚೆಯರ್ಮ್ಯಾನ್ ಹಾಗೂ ಹಲವಾರು ಗಣ್ಯ ವ್ಯಕ್ತಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಫುಟ್ಬಾಲ್ ಸಂಸ್ಥೆ ಸದಸ್ಯ ವಿಜಯ್ ಸುವರ್ಣ, ಫಿರೋಜ್, ಖಜಾಂಚಿ, ಅನಿಲ್ ಪಿ.ವಿ. ಸದಸ್ಯರು, ಲತೀಫ್ ಕಸಬಾ ಬೆಂಗ್ರೆ , ಅಸ್ಪಾಕ್ ರವರು ಉಪಸ್ಥಿತರಿದ್ದರು.