ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾರ್ಥಿ ಜನತಾದಳ (ಜಾತ್ಯಾತೀತ) ವತಿಯಿಂದ ನಡೆದ ಮಹತ್ವದ ಸಭೆಯಲ್ಲಿ ನಿಹಾಲ್ ಎಸ್. ಕೋಡ್ತುಗುಳಿಯನ್ನು ಜಿಲ್ಲಾ ವಿದ್ಯಾರ್ಥಿ ಜನತಾದಳದ ಅಧ್ಯಕ್ಷರಾಗಿ ಅಧಿಕೃತವಾಗಿ ಘೋಷಿಸಿ, ಜಿಲ್ಲಾ ಸಮಿತಿ ರಚನೆಗೆ ಅಗತ್ಯವಾದ ಅಧಿಕಾರವನ್ನು ಹಸ್ತಾಂತರಿಸಲಾಯಿತು.
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಜನತಾದಳದ ಅಧ್ಯಕ್ಷರಾದ ಜಾಕೆ ಮಾಧವ ಗೌಡ ಅವರು ನಿಹಾಲ್ ಎಸ್. ಕೋಡ್ತುಗುಳಿಗೆ ಅಧಿಕಾರ ಹಸ್ತಾಂತರಿಸಿ, ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಯುವ ನಾಯಕರಿಗೆ ಹೆಚ್ಚಿನ ಅವಕಾಶ ನೀಡುವ ಅಗತ್ಯವನ್ನು ಒತ್ತಿ ಹೇಳಿದರು. ವಿದ್ಯಾರ್ಥಿ ಘಟಕವು ಪಕ್ಷದ ಭವಿಷ್ಯವಾಗಿದ್ದು, ಸಂಘಟನೆಯ ವಿಸ್ತರಣೆ ಹಾಗೂ ಯುವಕರನ್ನು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ನಿಹಾಲ್ ಎಸ್. ಕೋಡ್ತುಗುಳಿ ಅವರು, ತಮಗೆ ನೀಡಲಾದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವ ಭರವಸೆ ನೀಡಿ, ಜಿಲ್ಲೆಯಾದ್ಯಂತ ವಿದ್ಯಾರ್ಥಿ ಘಟಕವನ್ನು ಬಲಿಷ್ಠಗೊಳಿಸಲು, ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುವುದಾಗಿ ಹೇಳಿದರು.

ಸಭೆಯಲ್ಲಿ ಮೀನುಗಾರ ಘಟಕದ ರಾಜ್ಯಾಧ್ಯಕ್ಷರಾದ ರತ್ನಾಕರ್ ಸುವರ್ಣ, ಯುವ ಘಟಕದ ಜಿಲ್ಲಾ ಅಧ್ಯಕ್ಷ ಅಕ್ಷಿತ್ ಸುವರ್ಣ, ಸುಳ್ಯ ತಾಲೂಕು ಅಧ್ಯಕ್ಷ ಸುಕುಮಾರ ಕೋಡ್ತುಗುಳಿ, ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಜಿಲ್ಲಾ ಮುಖಂಡರಾದ ಇಕ್ಬಲ್ ಮುಲ್ಕಿ, ಶಶಿರಾಜ್ ಶೆಟ್ಟಿ ಕೊಳಂಬೆ, ಯೋಗಿಶ್ ಶೆಟ್ಟಿ ಜಪ್ಪು, ರತೀಶ್, ಸತ್ಯನಾರಾಯಣ ಸುಳ್ಯ ಹಾಗೂ ಚಿತ್ರನಟ ರಣವೀರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಭೆ ಸ್ನೇಹಪೂರ್ಣ ಹಾಗೂ ಉತ್ಸಾಹಭರಿತ ವಾತಾವರಣದಲ್ಲಿ ನಡೆದಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಜನತಾದಳವನ್ನು ಜಿಲ್ಲೆಯಾದ್ಯಂತ ಬಲಿಷ್ಠಗೊಳಿಸುವ ದೃಢ ನಿರ್ಧಾರ ಕೈಗೊಳ್ಳಲಾಯಿತು.


