ಮಂಗಳೂರು: ಕಾಸರಗೋಡಿನಲ್ಲಿ ದೈವದರ್ಶನಕ್ಕೆಂದು ತೆರಳಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನ ಹೊಂದಿದ ದರ್ಶನ ಪಾತ್ರಿ ಜಾರಿಗೆಕಟ್ಟೆ ದಿವಾಕರ ಪೂಜಾರಿ ತಮ್ಮ ವೃತ್ತಿ ಜೀವನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ವೀರೇಂದ್ರ ಹೆಗ್ಗಡೆಯವರಿಂದ ದೀಕ್ಷೆ ಪಡೆದು, ದೈವಾರಾಧನೆ ಕ್ಷೇತ್ರ ಮತ್ತು ಸಾವಿರಾರು ಕುಟುಂಬಗಳಲ್ಲಿ ಪಂಜುರ್ಲಿ ದರ್ಶನ ಸೇವೆ ಮೂಲಕ ಜನಾನುರಾಗಿಯಾಗಿದ್ದರು.
ಇವರು ಜಾರಿಗೆಕಟ್ಟೆ ಕೊರಗಜ್ಜ ಕೊರಗ ಪಂಜುರ್ಲಿ ಕ್ಷೇತ್ರದ ಧರ್ಮದರ್ಶಿಯಾಗಿ ದೇವಾರಾಧನೆ ಕ್ಷೇತ್ರದಲ್ಲಿ ಮಾದರಿ ಸೇವಕರಾಗಿ ಗುರುತಿಸಿಕೊಂಡಿದ್ದರು. ಇವರ ಮಾರ್ಗದರ್ಶನದಲ್ಲಿ ಸಾವಿರಾರು ದೈವಾರಾಧನೆ ಕ್ಷೇತ್ರ ಹಾಗೂ ಕುಟುಂಬಗಳು ಶ್ರೇಯೋಭಿವೃದ್ಧಿ ಹೊಂದಿರುತ್ತವೆ.
ಜಾರಿಗೆಕಟ್ಟೆಯಲ್ಲಿರುವ ಕೊರಗಜ್ಜ ಕೊರಗ ಪಂಜುರ್ಲಿ ಕ್ಷೇತ್ರದಲ್ಲಿ ಸಾವಿರಾರು ಜಾತ್ಯಾತೀತ ಭಕ್ತರು ಆಗಮಿಸಿ ತಮ್ಮ ಅಹವಾಲು ಕೋರಿ ಪರಿಹಾರ ಕಂಡುಕೊಂಡಿದ್ದಾರೆ.
ಮೃತರು ಪೋಸ್ಟಲ್ ಬ್ರಹ್ಮ ಶ್ರೀ ನಾರಾಯಣ ಗುರು ಸಂಘದ ಅಧ್ಯಕ್ಷರಾಗಿದ್ದು, ಇತ್ತೀಚೆಗೆ ಸಂಘದ ನೂತನ ಕಟ್ಟಡ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ಇವರ ನಿಧನದಿಂದ ದೈವಾರಾಧನೆ ಕ್ಷೇತ್ರದ ಮಾದರಿ ಸೇವಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ನಮ್ಮೂರು ಆಟ ಕೂಟ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ಮುಲ್ಕಿ ಕರುಣಾಕರ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

