ಉಡುಪಿ, ಫೆ. 9:
ಉಡುಪಿ ತಾಲೂಕಿನ ನೇಜಾರು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಬಡ ಮಹಿಳೆ ಸುಲೋಚನ (ಲೋಕು ಅವರ ಪುತ್ರಿ) ಅವರ ಮೇಲೆ ಮಣಿಪಾಲ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಮುಖ್ಯಸ್ಥ ಸಂದೀಪ್ ಕೃಷ್ಣ ಪೂಜಾರಿ ನಡೆಸಿರುವ ಅಮಾನವೀಯ ದೌರ್ಜನ್ಯ, ಜಾತಿ ನಿಂದನೆ, ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ಹಾಗೂ ಅಕ್ರಮ ಹಣಕಾಸು ವ್ಯವಹಾರಗಳ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆ (SC/ST Act) ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಮತ್ತು ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಇಂದು ಉಡುಪಿ ಪತ್ರಿಕಾ ಭವನದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂತ್ರಸ್ತೆ ಸುಲೋಚನ ಅವರು, ತಮ್ಮ ಮನೆ ರಿಪೇರಿ ಕಾರ್ಯಕ್ಕಾಗಿ ಸಾಲ ಪಡೆಯುವ ಉದ್ದೇಶದಿಂದ ಮಣಿಪಾಲ ಸೌಹಾರ್ದ ಸೊಸೈಟಿಗೆ ತೆರಳಿದ ವೇಳೆ, ಸೊಸೈಟಿಯ ಮುಖ್ಯಸ್ಥ ಸಂದೀಪ್ ಕೃಷ್ಣ ಪೂಜಾರಿ ಅವರು ಸಾಲದ ನೆಪದಲ್ಲಿ ತಮ್ಮ ಖಾತೆಯನ್ನು ದುರುಪಯೋಗಪಡಿಸಿಕೊಂಡು ಬಡ್ಡಿ ದಂಧೆ ನಡೆಸುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದರು.
ಆರಂಭದಲ್ಲಿ ಒಂದು ಲಕ್ಷ ರೂಪಾಯಿಯನ್ನು ತಮ್ಮ ಖಾತೆಗೆ ಜಮೆ ಮಾಡಿಸಿ, ನಂತರ ಕ್ರಮೇಣ ಸುಮಾರು ಏಳು ಲಕ್ಷ ರೂಪಾಯಿ ತನಕ ಹಣವನ್ನು ಬೇರೆಯವರಿಗೆ ಬಡ್ಡಿಗೆ ನೀಡುವ ವ್ಯವಹಾರವನ್ನು ತಮ್ಮ ಹೆಸರಿನಲ್ಲಿ ನಡೆಸುವಂತೆ ಬಲವಂತಪಡಿಸಲಾಗಿದೆ ಎಂದು ವಿವರಿಸಿದರು.
ಈ ಅಕ್ರಮ ಹಣಕಾಸು ವ್ಯವಹಾರಕ್ಕೆ ವಿರೋಧ ವ್ಯಕ್ತಪಡಿಸಿದಾಗ, ಹಣ ವರ್ಗಾವಣೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಲಾಗಿದೆ. ಅಲ್ಲದೆ 2026ರ ಜನವರಿ 26ರಂದು ತಮ್ಮ ಬಾಬ್ತು ಚಿನ್ನದ ಸರವನ್ನು ಮಾರಾಟ ಮಾಡಲು ಒತ್ತಾಯಿಸಿ, ಅದರ ಹಣವನ್ನೂ ಸುಲಿಗೆ ಮಾಡಲಾಗಿದೆ ಎಂದು ಸಂತ್ರಸ್ತೆ ದೂರಿದರು.
ಇದಕ್ಕಿಂತಲೂ ಗಂಭೀರವಾಗಿ, 06-02-2026ರಂದು ಸಂಜೆ ವೇಳೆ ಆರೋಪಿತನು ಸಂತ್ರಸ್ತೆಯ ಮನೆಗೆ ಅಕ್ರಮವಾಗಿ ನುಗ್ಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದು, ಜಾತಿ ನಿಂದನೆ ಮಾಡಿದ್ದಾನೆ.
“ನೀನು ಕೀಳು ಜಾತಿಗೆ ಸೇರಿದವಳು, ನಿನ್ನಿಂದಾಗಲಿ ನಿನ್ನ ಜಾತಿಯವರಿಂದಾಗಲಿ ನನ್ನನ್ನು ಏನೂ ಮಾಡಲಾಗುವುದಿಲ್ಲ” ಎಂದು ಅವಮಾನಿಸಿ, ಕೈ ಹಿಡಿದು ಎಳೆದಾಡಿ ಲೈಂಗಿಕ ಕಿರುಕುಳ ನೀಡಲಾಗಿದೆ. ಅಲ್ಲದೆ ತೃತೀಯಲಿಂಗಿಗಳನ್ನು ಬಳಸಿಕೊಂಡು ಮತ್ತಷ್ಟು ಕಿರುಕುಳ ನೀಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಅವರು ಕಣ್ಣೀರಿಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಸಂಚಾಲಕಿ ಮಹಾಲಕ್ಷ್ಮಿ ಮಹಾದೇವ ಅವರು,
“ಸಂತ್ರಸ್ತ ಮಹಿಳೆಗೆ ತಕ್ಷಣ ನ್ಯಾಯ ದೊರಕಬೇಕು. ಆರೋಪಿತನ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಎಲ್ಲಾ ಸೂಕ್ತ ಸೆಕ್ಷನ್ಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ನ್ಯಾಯ ಸಿಗುವಲ್ಲಿ ವಿಳಂಬವಾದಲ್ಲಿ ತುಳುನಾಡ ರಕ್ಷಣಾ ವೇದಿಕೆ ಬೆಂಬಲದೊಂದಿಗೆ ಉಗ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಮತಾ ನಾರಾಯಣ, ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕಂಚುಗೋಡು, ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಉಪಾಧ್ಯಕ್ಷ ಜಯರಾಮ್ ಪೂಜಾರಿ, ಮಹಿಳಾ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಮತಾ ಅಮೀನ್ ಸೇರಿದಂತೆ ಇತರರು ಮಾತನಾಡಿ ಆರೋಪಿತನು ನಡೆಸಿರುವ ಅಕ್ರಮ ಹಣಕಾಸು ವ್ಯವಹಾರ, ಬಡ್ಡಿ ದಂಧೆ ಹಾಗೂ ಸುಲಿಗೆ ಪ್ರಕರಣಗಳ ಕುರಿತು ಸರ್ಕಾರದ ಸಂಬಂಧಪಟ್ಟ ಇಲಾಖೆ ಮತ್ತು ತನಿಖಾಧಿಕಾರಿಗಳು ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ಜಯ ಪೂಜಾರಿ (ಲಕ್ಷ್ಮಿನಗರ), ಶಿವರಾಮ ಗಂಗೊಳ್ಳಿ, ಸವೀನ್ ಗಂಗೊಳ್ಳಿ, ಜ್ಯೋತಿ ಬನ್ನಂಜೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.


